ADVERTISEMENT

ಹಾಕಿ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ 5 ತಂಡ

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಟೂರ್ನಿ– ಹೈಪ್ಲೈಯರ್ಸ್ ಕಪ್ 2025

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:12 IST
Last Updated 23 ಡಿಸೆಂಬರ್ 2025, 6:12 IST
ವಿರಾಜಪೇಟೆ ಸಮೀಪದ ವಿ.ಬಾಡಗದಲ್ಲಿ ಹೈಪ್ಲೈಯರ್ಸ್ ಕಪ್ ನಲ್ಲಿ ಸೋಮವಾರ ಮಳವಂಡ ತಂಡವು ಕೇಳಪಂಡ ತಂಡವನ್ನು ಮಣಿಸಿ ಮುನ್ನಡೆಯಿತು
ವಿರಾಜಪೇಟೆ ಸಮೀಪದ ವಿ.ಬಾಡಗದಲ್ಲಿ ಹೈಪ್ಲೈಯರ್ಸ್ ಕಪ್ ನಲ್ಲಿ ಸೋಮವಾರ ಮಳವಂಡ ತಂಡವು ಕೇಳಪಂಡ ತಂಡವನ್ನು ಮಣಿಸಿ ಮುನ್ನಡೆಯಿತು   

ವಿರಾಜಪೇಟೆ: ಸಮೀಪದ ಬಿಟ್ಟಂಗಾಲದ ವಿ.ಬಾಡಗದ ಹೈ ಪ್ಲೈಯರ್ಸ್ ತಂಡ‌ವು ಸರ್ಕಾರಿ‌ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಿರುವ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಹೈಪ್ಲೈಯರ್ಸ್ ಕಪ್–2025 ನಲ್ಲಿ ಸೋಮವಾರ‌ ನಡೆದ ಪಂದ್ಯಾಟದಲ್ಲಿ 5 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.

ಟೂರ್ನಿಯಲ್ಲಿ ಚೇಂದಂಡ, ಮಳವಂಡ, ಕಳ್ಳಿಚಂಡ, ಚೇಂದಿರ ಮತ್ತು ಕೊಂಗಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದವು.

ಮೊದಲ ಪಂದ್ಯದಲ್ಲಿ ಚೇಂದಂಡ ತಂಡವು ತೀತಮಾಡ ತಂಡವನ್ನು 5–1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಮೇರಿಯಂಡ ರಾಯ್ 17ನೇ ಮತ್ತು 35ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ತಿಮ್ಮಣ್ಣ 19ನೇ ಮತ್ತು 26ನೇ ನಿಮಿಷದಲ್ಲಿ ಹಾಗೂ ತಂಡದ ಬೋಪಣ್ಣ 29ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ತೀತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಕಾರ್ಯಪ್ಪ 12ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ADVERTISEMENT

2ನೇ ಪಂದ್ಯದಲ್ಲಿ ಮಳವಂಡ ತಂಡವು ಕೇಳಪಂಡ ತಂಡವನ್ನು 3–1 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ 9ನೇ ನಿಮಿಷದಲ್ಲಿ ಅತಿಥಿ ಆಟಗಾರ ಮುತ್ತಪ್ಪ, 31ನೇ ನಿಮಿಷದಲ್ಲಿ ತಿಮ್ಮಯ್ಯ ಹಾಗೂ 32ನೇ ನಿಮಿಷದಲ್ಲಿ ಮತ್ತೋರ್ವ ಅತಿಥಿ ಆಟಗಾರ ಪ್ರಿನ್ಸ್ ಪೊನ್ನಣ್ಣ ಗೋಲು ದಾಖಲಿಸಿದರೆ, ಪರಾಜಿತ ತಂಡದ ಪರವಾಗಿ 27ನೇ ನಿಮಿಷದಲ್ಲಿ ನಾಣಯ್ಯ ಗೋಲು ಹೊಡೆದರು.

3ನೇ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಚಂದೂರ ತಂಡವನ್ನು 2–1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಕಳ್ಳಿಚಂಡ ತಂಡದ ಪರವಾಗಿ 25ನೇ ನಿಮಿಷದಲ್ಲಿ ಸಾವನ್ ಹಾಗೂ 31ನೇ ನಿಮಿಷದಲ್ಲಿ ಗಣಪತಿ ಗೋಲು ದಾಖಲಿಸಿದರೆ ಚಂದೂರ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ 35ನೇ ನಿಮಿಷದಲ್ಲಿ ಗೋಲು ಬಾರಿಸಿದರು.
4ನೇ ಪಂದ್ಯದಲ್ಲಿ ಚೇಂದಿರ ತಂಡವು ಮೇಚಿಯಂಡ ತಂಡವನ್ನು 3–0 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ 19ನೇ ನಿಮಿಷದಲ್ಲಿ ಬೋಪಣ್ಣ, 35ನೇ ಮತ್ತು 39ನೇ ನಿಮಿಷದಲ್ಲಿ ಅತಿಥಿ ಆಟಗಾರ ದೀಪಕ್ ಗೋಲು ಹೊಡೆದು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ದಿನದ ಕೊನೆಯ ಪಂದ್ಯದಲ್ಲಿ ಕೊಂಗಂಡ ತಂಡವು ಕಡೇಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ 6–5 ಗೋಲುಗಳ ಅಂತರದಿಂದ ಮಣಿಸಿತು. ಪಂದ್ಯದ ದ್ವಿತೀಯಾರ್ಧ ಪೂರ್ಣಗೊಂಡಾಗ ಉಭಯ ತಂಡಗಳು ತಲಾ ಒಂದು ಗೋಲಿನ ಸಮಬಲ ಸಾಧಿಸಿದ್ದರಿಂದ ಟೈಬ್ರೇಕರ್‌ನಲ್ಲಿ ವಿಜೇತ ತಂಡದ ಪರವಾಗಿ 5 ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ 4 ಗೋಲುಗಳಷ್ಟೇ ದಾಖಲಾದವು. ಇದಕ್ಕೂ ಮೊದಲು ಕಡೇಮಾಡ ತಂಡದ ರಚನ್ 37ನೇ ನಿಮಿಷದಲ್ಲಿ ಮೊದಲ ಫೀಲ್ಡ್ ಗೋಲ್ಡ್ ದಾಖಲಿಸಿದರೆ, ಕೊಂಗಂಡ ತಂಡದ ಆಟಗಾರ ಮಹೇಂದ್ರ 39ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿ ತಂಡದ ಅಂತರವನ್ನು ಸಮನಾಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.