ಮಡಿಕೇರಿ: ಇಲ್ಲಿ ಸೋಮವಾರ ನಡೆದ ಭೂಸೇನೆಯ ಸದರ್ನ್ ಕಮಾಂಡ್ ವಿಭಾಗದ ನಿವೃತ್ತ ಸೈನಿಕರ ಸಮಾವೇಶದಲ್ಲಿ 565 ಮಂದಿ ಭಾಗವಹಿಸಿ ತಮ್ಮ ಅಹವಾಲು ಸಲ್ಲಿಸಿದರು. 376 ಮಂದಿಯ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ತಂಡವು 72 ರೋಗಿಗಳಿಗೆ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ನೀಡಿತು. ಇದಲ್ಲದೆ, ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ 19 ಮಂದಿ ಭಾಗಿಯಾದರು.
ಇಲ್ಲಿನ ‘ಕ್ರಿಸ್ಟಲ್ ಕೋರ್ಟ್’ ಹೋಟೆಲ್ ಸಭಾಂಗಣದಲ್ಲಿ ನಡೆದ ಈ ಸಮಾವೇಶವನ್ನು ದಕ್ಷಿಣ ಭಾರತದ ಭೂ ಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್, ಪರಮ ಮತ್ತು ಅತಿ ವಿಶಿಷ್ಟ ಸೇವಾಪದಕ ವಿಜೇತ ಧೀರಜ್ ಸೇತ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಈಗ ಕೇವಲ ಭೂಸೇನೆಗೆ ಸಂಬಂಧಿಸಿದ ಮಾಜಿ ಸೈನಿಕರ ಹಾಗೂ ಅವರ ಸಂಬಂಧಿಕರ ಕುಂದುಕೊರತೆ ನಿವಾರಣಾ ಸಮಾವೇಶ ನಡೆಯುತ್ತಿದೆ. ಮುಂದಿನ ವರ್ಷ ಭೂಸೇನೆಯ ಜೊತೆಗೆ ವಾಯು ಸೇನೆ ಮತ್ತು ನೌಕಾಸೇನೆಯ ನಿವೃತ್ತ ಯೋಧರ ಹಾಗೂ ಅವರ ಸಂಬಂಧಿಕರ ಕುಂದುಕೊರತೆ ನಿವಾರಿಸುವ ಸಮಾವೇಶ ನಡೆಸಲು ಸರ್ವ ರೀತಿಯಲ್ಲೂ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.
ಭೂಸೇನೆಯ ನಿವೃತ್ತ ಯೋಧರ ಹಾಗೂ ಅವರ ಸಂಬಂಧಿಕರ ಕುಂದುಕೊರತೆ ನಿವಾರಿಸುವ ಈ ಬಗೆಯ ಸಮಾವೇಶವು ಕೊಡಗಿನಲ್ಲಿ ಪ್ರತಿ ವರ್ಷ ನಡೆಯುತ್ತಿದೆ. ಏಕೆಂದರೆ, ಕೊಡಗು ಜಿಲ್ಲೆ ಭಾರತೀಯ ಸೇನೆಗೆ ಕೊಟ್ಟಿರುವ ಕೊಡುಗೆ ಅನುಪಮವಾದುದು. ಇಲ್ಲಿರುವಷ್ಟು ಯೋಧರು, ಮಾಜಿ ಯೋಧರು, ಅವರ ಸಂಬಂಧಿಕರು ಬೇರೆ ಜಿಲ್ಲೆಗಳಲ್ಲಿರುವುದು ತೀರಾ ಕಡಿಮೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಸರಿಯಲ್ಲ. ಯುವ ಸಮುದಾಯ ಸೇನೆಗೆ ಸೇರಿ ದೇಶಸೇವೆ ಮಾಡುವುದರತ್ತ ಚಿತ್ತ ಹರಿಸಬೇಕು ಎಂದರು.
ಸೈನಿಕರಿಗಾಗಿ ಇರುವ ಕ್ಯಾಂಟೀನ್ ಅನ್ನು ಇನ್ನಷ್ಟು ದೊಡ್ಡ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಇನ್ನಷ್ಟು ಉತ್ತಮ ಸೇವೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಾಲಿ ಹಿರಿಯ ಸೇನಾಧಿಕಾರಿಗಳು ಸೇರಿದಂತೆ ನಿವೃತ್ತ ಏರ್ ಮಾರ್ಷಲ್ ನಂದ ಕಾರ್ಯಪ್ಪ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ, ಗೌರವ ಕಾರ್ಯದರ್ಶಿ ಮೇಜರ್ ಓ.ಎಸ್.ಚಿಂಗಪ್ಪ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.