ADVERTISEMENT

9 ಮಂದಿಯಿಂದ ದೇಹದಾನಕ್ಕೆ ನೋಂದಣಿ

ರೆಡ್‌ಕ್ರಾಸ್‌ ಭವನದಲ್ಲಿ 24 ಮಂದಿಯಿಂದ ರಕ್ತದಾನ, ಇಬ್ಬರಿಂದ ನೇತ್ರದಾನಕ್ಕೆ ನೋಂದಣಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:51 IST
Last Updated 13 ನವೆಂಬರ್ 2025, 2:51 IST
ಮಡಿಕೇರಿಯ ರೆಡ್‌ಕ್ರಾಸ್‌ ಭವನದಲ್ಲಿ ಬುಧವಾರ ರಕ್ತದಾನ ಮತ್ತು ಅಂಗಾಂಗ ದಾನ ನೋಂದಣಿಯ ಶಿಬಿರ ನಡೆಯಿತು
ಮಡಿಕೇರಿಯ ರೆಡ್‌ಕ್ರಾಸ್‌ ಭವನದಲ್ಲಿ ಬುಧವಾರ ರಕ್ತದಾನ ಮತ್ತು ಅಂಗಾಂಗ ದಾನ ನೋಂದಣಿಯ ಶಿಬಿರ ನಡೆಯಿತು   

ಮಡಿಕೇರಿ: ಇಲ್ಲಿನ ರೆಡ್‌ಕ್ರಾಸ್‌ ಭವನದಲ್ಲಿ ಬುಧವಾರ 24 ಮಂದಿ ರಕ್ತದಾನ ಮಾಡಿದರೆ, 9 ಮಂದಿ ದೇಹದಾನ, ಇಬ್ಬರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ವಿವೇಕ ಬಳಗನ ವಿವೇಕ ಜಾಗೃತ ಬಳಗ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನ ನೋಂದಣಿಯ ಶಿಬಿರ ಆಯೋಜನೆಗೊಂಡಿತ್ತು.

ರಕ್ತ ನಿಧಿ ಘಟಕದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ‘ಹೆಚ್ಚುಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ‘ಮರಣ ನಂತರದ ಅಂಗಾಂಗ ದಾನಕ್ಕೆ ಜೀವಂತವಾಗಿರುವಾಗ ನೋಂದಣಿ ಪ್ರಕ್ರಿಯೆ ಮುಖ್ಯ.  ಒಬ್ಬರ ಅಂಗಾಂಗ ದಾನದಿಂದ 8 ಜನರ ಜೀವ ಮತ್ತು ಜೀವನ ಉಳಿಸಲು ಸಹಕಾರಿಯಾಗುತ್ತದೆ’ ಎಂದರು

ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಮಾಲತಿ ಅವರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಿಳಿಸಿ ರಕ್ತದಾನ ಮತ್ತು ಅಂಗಾಂಗ ದಾನದ ದಾನಿಗಳಿಗೆ ಉತ್ತೇಜನ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ಅಂಗಾಂಗ ದಾನ ನೋಂದಣಿ ಹೊಸ ಪ್ರಕ್ರಿಯೆಯಾಗಿದ್ದು ಇದಕ್ಕೆ ಸಹಕರಿಸಲು ಕರೆ ನೀಡಿದರು.

ಮಿದುಳು ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿಕ್ರಂ ಅವರು ಮಾಹಿತಿ ನೀಡಿದರು ಮತ್ತು ರಕ್ತ ದಾನ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಧನಂಜಯ್, ಹಿರಿಯ ಎಚ್‌ಐಒ ಶ್ರೀನಾಥ್, ಸಿಬ್ಬಂದಿ ಕಾವ್ಯ, ಜನ್ಯ, ಜ್ಯೋತಿ ಮತ್ತು ರಕ್ತ ನಿಧಿ ಘಟಕದ ತಂಡದವರು ಪಾಲ್ಗೊಂಡಿದ್ದರು

ಎನ್‌ಸಿಡಿ ತಂಡ ಮತ್ತು ಟಿಟಿಎಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದೊತ್ತಡದ, ಮಧುಮೇಹ, ಇಸಿಜಿ ಪರೀಕ್ಷೆಯನ್ನು ನಡೆಸಲಾಯಿತು.