ವಿರಾಜಪೇಟೆ: ಜಿಲ್ಲೆಯ ಬೇಡುಹಬ್ಬಗಳ ಪೈಕಿ ಕೊನೆಯ ಹಬ್ಬವಾಗಿರುವ ವಿಶಿಷ್ಟ ಮಾದರಿಯ ಬೇರಳಿನಾಡಿನ ಪಾರಣ ಬೇಡುಹಬ್ಬವು ಭಾನುವಾರ ಶ್ರದ್ಧಾ, ಭಕ್ತಿಯಿಂದ ತೆರೆ ಕಂಡಿತು.
ಶನಿವಾರ ಬೇರಳಿನಾಡಿನ ವಿವಿಧ ದೇವಾಲಯಗಳಲ್ಲಿ ವೇಷ ಧರಿಸಿದ ಗ್ರಾಮಸ್ಥರು ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಗ್ರಾಮದ ಮನೆಮನೆಗೆ ಭೇಟಿ ನೀಡಿ, ಹಾಡುಗಳನ್ನು ಹಾಡುತ್ತಾ, ರಂಜಿಸಿ ಹರಕೆಯ ಕಾಣಿಕೆ ಪಡೆದರು.
ಬೇರಳಿನಾಡಿನ ವಿವಿಧ ದೇವಾಲಯಗಳಲ್ಲಿ ರಚಿಸಲಾಗಿದ್ದ 3 ಕುದುರೆ ಹಾಗೂ 2 ಆನೆಯ ಪ್ರತಿರೂಪಗಳು ವಿವಿಧ ಕುಟುಂಬಗಳ ಐನ್ಮನೆಯಲ್ಲಿ ಶೃಂಗಾರಗೊಂಡವು. ಭಾನುವಾರ ಪಾರಣಮಾನಿಯ ಕಡೆ ಹೊರಟವು. ಈ ಕುದುರೆ ಹಾಗೂ ಆನೆಯ ಪ್ರತಿರೂಪದೊಂದಿಗೆ ವೇಷಧಾರಿಗಳು ಜತೆಗೂಡಿ ಪಾರಣಮಾನಿಯನ್ನು ಮುಸ್ಸಂಜೆ ಹೊತ್ತು ಸೇರಿದರು. ದೈವದ ದರ್ಶನ ಪಡೆದ ಬಳಿಕ ಕುದುರೆ ಹಾಗೂ ಆನೆಯ ಪ್ರತಿರೂಪದೊಂದಿಗೆ ವೇಷಧಾರಿಗಳು ಹಾಗೂ ಗ್ರಾಮಸ್ಥರು ಪಾರಣಮಾನಿಯಲ್ಲಿ ಉತ್ಸಾಹದಿಂದ ಪ್ರದಕ್ಷಿಣಿಗೆ ಬಂದರು.
ನಾಡಿನ 5 ನಿಗದಿತ ಸ್ಥಳಗಳಿಂದ ಶೃಂಗಾರಗೊಂಡು ಪಾರಣಮಾನಿಗೆ ಮೆರವಣಿಗೆಯೊಂದಿಗೆ ತಂದ ಕುದುರೆ ಹಾಗೂ ಆನೆಯ ಪ್ರತಿರೂಪಗಳನ್ನು ಉತ್ಸವದ ಕೊನೆಯಲ್ಲಿ ಕಡಿದು ದೇವರಿಗೆ ಆಹುತಿ ನೀಡಲಾಯಿತು.
ಇದು ಪಾರಣ ಹಬ್ಬದ ವಿಶೇಷತೆಯಾಗಿದೆ. ಜಿಲ್ಲೆಯ ಇತರ ಕಡೆಗಳಲ್ಲಿ ಬೇಡುಹಬ್ಬಗಳಂತೆ ಇಲ್ಲಿ ಬಿದಿರಿನ ಕುದುರೆ ಹಾಗೂ ಆನೆಯನ್ನು ಉತ್ಸವದ ನಂತರ ವಾಪಸ್ ಮನೆಗೆ ತಂದು ರಕ್ಷಿಸಿಡುವುದಿಲ್ಲ. ಬದಲಾಗಿ ಉತ್ಸವದ ಕೊನೆಯಲ್ಲಿ ಆಹುತಿ ನೀಡುವುದು ಪದ್ಧತಿ.
ಈ ಬಾರಿಯ ಹಬ್ಬದಲ್ಲಿ ವಿದೇಶಿ ಮಹಿಳೆಯ ವೇಷ, ವಡ್ಡರ ವೇಷ ಹಾಗೂ ಬಂಡುವೇಷ ವಿಶೇಷವಾಗಿ ಗಮನ ಸೆಳೆಯಿತು. ಬೇರೆ ಊರುಗಳಲ್ಲಿ ನೆಲೆಸಿರುವ ನಾಡಿನ ಜನರು ಹಬ್ಬಕ್ಕಾಗಿ ಕೆಲವು ದಿನಗಳ ಹಿಂದೆಯೇ ಗ್ರಾಮಕ್ಕೆ ಬಂದು ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಮೇ 26ರಂದು ಪಾರಣ ಬೇಡುಹಬ್ಬಕ್ಕೆ ಚಾಲನೆ ನೀಡಲಾಗಿತ್ತು.
ಕುದುರೆ ಹಾಗೂ ಆನೆಯ ಪ್ರತಿರೂಪನ್ನು ಹೊರುವ ವ್ಯಕ್ತಿಗಳು ಹಬ್ಬದ ದಿನ ಸಂಪೂರ್ಣ ಸಸ್ಯಹಾರಿಗಳಾಗಿರುತ್ತಾರೆ.
ಜಿಲ್ಲೆಯಲ್ಲಿ ಕಾವೇರಿ ಸಂಕ್ರಮಣದ ಮಾರನೆಯ ದಿನ ಕುಂದತಬೊಟ್ಟ್ ದೇವಾಲಯದಲ್ಲಿ ಬೇಡು ಹಬ್ಬ ಪ್ರಾರಂಭಗೊಂಡರೆ, ಜನ್ 1ರಂದು ಪಾರಣಮಾನಿಯಲ್ಲಿ ನಡೆಯುವ ಹಬ್ಬದ ಮೂಲಕ ಜಿಲ್ಲೆಯಲ್ಲಿ ಬೇಡುಹಬ್ಬಗಳಿಗೆ ವಿದಾಯ ಹೇಳುವುದು ವಾಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.