ADVERTISEMENT

ನಾಡಗೀತೆಗೆ ನೂರು ವರ್ಷ: ಸಹಸ್ರ ಕಂಠದಲ್ಲಿ ಮೊಳಗಿದ ನಾಡಗೀತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 6:30 IST
Last Updated 5 ಜನವರಿ 2025, 6:30 IST
ಕುವೆಂಪು ರಚಿಸಿದ ‘ನಾಡಗೀತೆಗೆ ನೂರು ವರ್ಷ’ ತುಂಬಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ನಾಡಗೀತೆ ಹಾಡಲಾಯಿತು
ಕುವೆಂಪು ರಚಿಸಿದ ‘ನಾಡಗೀತೆಗೆ ನೂರು ವರ್ಷ’ ತುಂಬಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ನಾಡಗೀತೆ ಹಾಡಲಾಯಿತು   

ಮಡಿಕೇರಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಾಡಗೀತೆಯು ಮೊಳಗಿತು.

ಕುವೆಂಪು ರಚಿಸಿದ ‘ನಾಡಗೀತೆಗೆ ನೂರು ವರ್ಷ’ ತುಂಬಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಹಸ್ರ ಕಂಠ ಗಾಯನ ಕಾರ್ಯಕ್ರಮಕ್ಕೆ ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಧ್ವನಿಯಾದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ‘ಈ ಗೀತೆಗಳಲ್ಲಿನ ಪದಪುಂಜಗಳು ಮನಮುಟ್ಟುವಂತಿವೆ. ಸರ್ವಜನಾಂಗದ ಶಾಂತಿಯ ತೋಟ ಎಂಬಂತಹ ಆಶಯ ಈ ಗೀತೆಯಿಂದ ಹೊರಹೊಮ್ಮಿದೆ’ ಎಂದು ವಿವರಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರು ನಾಡಗೀತೆ ರಚಿಸಿ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಹಸ್ರ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಶಾಲಾ ಕಾಲೇಜು ಹಂತದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕುವೆಂಪು ಅವರು ನಾಡಿಗೆ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

1924-25ರ ಅವಧಿಯಲ್ಲಿ ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವಂತೆ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ನಾಡಗೀತೆಯನ್ನು ರಚಿಸಿ ಕನ್ನಡ ನಾಡಿನ ಸಮೃದ್ಧಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಅವರು ನುಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳಾ ಮಾತನಾಡಿ, ‘ಕನ್ನಡ ನಾಡಿನ ವಿಸ್ತೀರ್ಣವನ್ನು ಚದರ ಮೈಲಿಗಳಲ್ಲಿ ಅಳೆಯುವುದಕ್ಕಿಂತ ಚದರ ವರ್ಷಗಳಲ್ಲಿ ಅಳೆಯಬೇಕಾಗಿದೆ’ ಎಂದರು.

ನಾಡು ಅಥವಾ ದೇಶ ಎಂದರೆ ಅದರ ಭೂಭಾಗ ಮಾತ್ರವಲ್ಲ ಅದರ ಜನ-ಭಾಷೆ-ಸಂಸ್ಕೃತಿ ಎಲ್ಲವೂ ಸೇರುತ್ತದೆ. ಇವು ತಮ್ಮ ತನವನ್ನು ಉಳಿಸಿಕೊಂಡು ವಿಶ್ವಾತ್ಮಕವಾಗುವ ಆಶಯಗಳೆಂದರೂ ತಪ್ಪಾಗುವುದಿಲ್ಲ. ಮುಂದೆ ಅವರೇ ಪ್ರತಿಪಾದಿಸಿದ ‘ವಿಶ್ವಮಾನವ ಸಂದೇಶ’ಕ್ಕೂ ಆಶಯಗಳಾಗಿವೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ‘ಕನ್ನಡ ನಾಡು ಕಟ್ಟುವಲ್ಲಿ ಕುವೆಂಪು ಅವರು ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, ‘ನಾಡುಕಂಡ ಶ್ರೇಷ್ಠ ಕವಿ ಕುವೆಂಪು ಆಗಿದ್ದಾರೆ. ರಾಷ್ಟ್ರ ಹಾಗೂ ನಾಡಿನ ಬಗ್ಗೆ ನಾಡಗೀತೆಯಲ್ಲಿ ವರ್ಣೀಸಿರುವುದು ವಿಶೇಷವಾಗಿದೆ. ರಾಷ್ಟ್ರದ ಹಿರಿಮೆಯನ್ನು ನಾಡಗೀತೆ ಮೂಲಕ ಸಾರಿದ್ದಾರೆ’ ಎಂದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಕೆ.ವಿ.ಶಶಿಕಲಾ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಸುಶೀಲಾ, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಟಿ.ಶಿವಶಂಕರ, ಪ್ರಾಥಮಿಕ ಶಾಲಾ ಅಭಿವೃದ್ಧಿ ಅಧ್ಯಕ್ಷ ಎನ್.ಜಗದೀಶ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜೆ.ಸಿ.ಶೇಖರ್, ವಿಜೇತ್, ಹರಿಣಿ ವಿಜಯ್, ಡಾ.ಕಾವೇರಿ ಪ್ರಕಾಶ್, ಪ್ರೇಮ್‍ಕುಮಾರ್, ಪ್ರೇಮ ರಾಘವಯ್ಯ, ಜಮೀರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.