ADVERTISEMENT

ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ಮಾದರಿ ರಾಷ್ಟ್ರ: ರುದ್ರಮುನಿ ಸ್ವಾಮೀಜಿ

ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:37 IST
Last Updated 26 ಫೆಬ್ರುವರಿ 2026, 7:37 IST
ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಸಮೂದಾಯ ಭವನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು
ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಸಮೂದಾಯ ಭವನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು   

ಸೋಮವಾರಪೇಟೆ: ವಿದೇಶಿಯರು ಭಾರತದ ಸಂಪತ್ತು ಕೊಳ್ಳೆಹೊಡೆಯುವುದರೊಂದಿಗೆ ಸಂಸ್ಕೃತಿ, ಸಂಪ್ರದಾಯವನ್ನು ನಾಶ ಮಾಡಿ ಹೋದರು. ಇನ್ನಾದರೂ ಹಿಂದೂಗಳು ಒಂದಾಗಬೇಕು ಎಂದು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಿಂದೂ ಸಂಗಮ ಆಯೋಜನ ಸಮಿತಿಯಿಂದ ತಾಕೇರಿ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವರು, ದೇವಸ್ಥಾನ, ಮಠಗಳ ಬಗ್ಗೆ ಗೌರವ, ನಂಬಿಕೆ ಇರಬೇಕು. ತಂದೆ ತಾಯಂದಿರು ಮಕ್ಕಳಿಗೆ ನೀತಿಪಾಠ ಹೇಳಿಕೊಡಬೇಕು. ಮಕ್ಕಳಿಗೆ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ತಿಳಿಹೇಳಬೇಕು. ಮಕ್ಕಳನ್ನು ಮೊಬೈಲ್‌ಗಳಿಗೆ ದಾಸರಾಗಲು ಬಿಟ್ಟು ವಿದೇಶಗಳಲ್ಲಿ ಓದುವಂತೆ ಒತ್ತಡ ಹಾಕಿದರೆ, ಪೋಷಕರೇ ವೃದ್ಧಾಶ್ರಮಕ್ಕೆ ಸೇರಬೇಕಾಗುತ್ತದೆ. ಭಾರತದ ಶಿಕ್ಷಣ ಪವಿತ್ರವಾಗಿದೆ. ಇಲ್ಲಿಯೇ ಮಕ್ಕಳು ಬೆಳೆದು ಬದುಕಲು ಅವಕಾಶ ಮಾಡಿಕೊಡಿ. ಧರ್ಮದಂತೆ ಬದುಕಿದರೆ ನೆಮ್ಮದಿ ಸಿಗುತ್ತದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ ಉಪಸ್ಥಿತರಿದ್ದ ಕುಟುಂಬ ಪ್ರಬೋಧನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸುಬ್ರಾಯ ನಂದೋಡಿ ಮಾತನಾಡಿ, ಇಡೀ ಜಗತ್ತನ್ನು ಒಂದುಗೂಡಿಸುವ ಶಕ್ತಿ ಭಾರತಕ್ಕಿದೆ. ಹಿಂದೂಗಳು ಒಗ್ಗಟ್ಟಾಗಿ, ಸಾಮರಸ್ಯದಿಂದ ಬದುಕಿದರೆ ಬಲಿಷ್ಠ ಭಾರತವನ್ನು ಕಟ್ಟಬಹುದು. ಭಾರತದ ಒಂದು ತುದಿಯಲ್ಲಿ ಹಿಮಾಲಯ ಪರ್ವತವಿದೆ. ಮೂರು ಕಡೆ ಸಮುದ್ರವಿದೆ. ಪ್ರಾಕೃತಿಕವಾಗಿ ರಕ್ಷಣಾತ್ಮಕ ದೇಶವಾಗಿದೆ. ಅತೀ ಹೆಚ್ಚು ನದಿಗಳು ದೇಶದೊಳಗೆ ಹರಿಯುತ್ತವೆ. ಸಮೃದ್ಧವಾದ ಜಲ ಸಂಪತ್ತು, ಖನಿಜ ಸಂಪತ್ತು ಯಥೇಚ್ಚವಾಗಿದೆ. ವೇದ, ಉಪನಿಷತ್ತುಗಳ ಜ್ಞಾನ ಸಂಪತ್ತು ದೇಶಕ್ಕಿದೆ. ಸ್ವಾತಂತ್ರ್ಯ ದೊರೆತು ಶತಮಾನೋತ್ಸವ ಅಚರಿಸಲು ಇನ್ನು ಎರಡು ದಶಕಗಳು ಮಾತ್ರ ಉಳಿದಿದೆ. ಅಷ್ಟರೊಳಗೆ ಪ್ರಪಂಚಕ್ಕೆ ಮಾದರಿ ರಾಷ್ಟ್ರವನ್ನು ನಾವೆಲ್ಲರೂ ಕಟ್ಟಬೇಕಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಸಿಕ್ಕ ನಂತರ ದೇಶವನ್ನ ಆಳಬೇಕಾದ ಜವಾಬ್ದಾರಿಯುತ ಜನರನ್ನು ಸೃಷ್ಟಿ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡಿಕೊಂಡು ಬರುತ್ತಿದೆ. ಬಲಿಷ್ಠ ದೇಶವನ್ನು ಕಟ್ಟಲು ಬೇಕಾದ ಮಾನವ ಸಂಪತ್ತನ್ನು ನಿರ್ಮಾಣ ಮಾಡುವ ಕಾಯಕದಲ್ಲಿ ತೊಡಿಗಿದೆ. ಅಂತಹ ಕಾರ್ಯಕ್ರಮದ ಭಾಗವೇ ಹಿಂದೂ ಸಂಗಮ. ಇಂತಹ ಕಾರ್ಯಕ್ರಮಗಳನ್ನು ಹಿಂದುಗಳೆ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡುತ್ತಿರುವುದು ಶ್ಲಾಘನೀಯ. ಹಿಂದೂಗಳು ಒಗ್ಗಟ್ಟಾಗುವ ಮೂಲಕ ಆರ್‌ಎಸ್ಎಸ್ ಕನಸನ್ನು ಸಾಕಾರಗೊಳಿಸಬೇಕು ಎಂದರು.

ವೇದಿಕೆಯಲ್ಲಿ ಕಿರಗಂದೂರು ಮಂಡಲ ಅಧ್ಯಕ್ಷ ಎಚ್.ಪಿ. ಶಿವಕುಮಾರ್, ಕಾಫಿ ಬೆಳೆಗಾರ ಎಂ.ಪಿ. ಮುತ್ತಣ್ಣ, ಗೃಹಿಣಿ ವಿಮಲ ಕೃಷ್ಣಕಾಂತ್ ಇದ್ದರು. ಅಯೋಜಕರಾದ ಅಮೃತ್, ಸುದೀರ್, ಪ್ರವೀಣ್ ಇದ್ದರು. ಶಾಲಾ ಮಕ್ಕಳಿಂದ ಭರತನಾಟ್ಯ, ಯಕ್ಷಗಾನ ನೃತ್ಯ, ಜಾನಪದ ನೃತ್ಯ, ಭಗವದ್ಗೀತೆ ಪಠಣ ಗಮನ ಸೆಳೆಯಿತು.

ಕಿರಗಂದೂರು ಅಂಗನವಾಡಿ ಬಳಿಯಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಮಹಿಳೆಯರು ಕಳಸ ಹೊತ್ತು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.