ADVERTISEMENT

ಮಡಿಕೇರಿ: ತಾರಾ ಮೆರುಗು ಪಡೆದ ಹಾಕಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 6:17 IST
Last Updated 4 ಏಪ್ರಿಲ್ 2025, 6:17 IST
ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪ‍ಂದ್ಯಾವಳಿ ಮುದ್ದಂಡ ಕಪ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಅವರು ಉಳ್ಳಿಯಡ ತಂಡದ ಪರವಾಗಿ ಗುರುವಾರ ಕಣಕ್ಕಿಳಿದರು
ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪ‍ಂದ್ಯಾವಳಿ ಮುದ್ದಂಡ ಕಪ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಅವರು ಉಳ್ಳಿಯಡ ತಂಡದ ಪರವಾಗಿ ಗುರುವಾರ ಕಣಕ್ಕಿಳಿದರು   

ಮಡಿಕೇರಿ: ಇಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಗುರುವಾರ ತಾರಾ ಮೆರುಗು ಪಡೆಯಿತು. ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಅವರು ಉಳ್ಳಿಯಡ ತಂಡದ ಪರವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಆಡಲು ಬಂದಿದ್ದರು.

ಆದರೆ, ಎದುರಾಳಿ ತಂಡ ತೋಲಂಡ ಭಾಗವಹಿಸದೇ ಇದ್ದುದ್ದರಿಂದ ಉಳ್ಳಿಯಡ ತಂಡ ವಾಕ್‌ಓವರ್‌ ಪಡೆಯಿತು.

ಟೈ ಬ್ರೇಕರ್‌ನಲ್ಲಿ ಗೆಲುವನ್ನು ನಿರ್ಧರಿಸಿದ ಮುಂಡೋಟಿರ ಮತ್ತು ಚೋಡುಮಾಡ ಹಾಗೂ ಚೇರಂಡ ಮತ್ತು ಚೆನ್ನಪಂಡ ತಂಡಗಳ ನಡುವಿನ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿದವು. ಅಂತಿಮವಾಗಿ, ಚೋಡುಮಾಡ 4–2ರಲ್ಲಿ ಚೇರಂಡ 4–3ರ ಅಂತರದಲ್ಲಿ ಜಯ ಗಳಿಸಿ ನಿಟ್ಟುಸಿರು ಬಿಟ್ಟವು.

ADVERTISEMENT

ಇನ್ನು ಭಾರಿ ಅಂತರದ ಗೆಲುವಿಗೆ ಕಾರಣವಾದ ಕಟ್ಟೆರ ಮತ್ತು ಮಾಳೇಟಿರ (ಕೆದಮುಳ್ಳೂರು) ಹಾಗೂ ಕಾಯಪಂಡ ಮತ್ತು ಉಪ್ಪಂಗಡ ತಂಡಗಳ ನಡುವಿನ ಪಂದ್ಯಗಳೂ ಪ್ರೇಕ್ಷಕರಿಗೆ ಮುದ ನೀಡಿದವು. ಮೇಲಿಂದ ಮೇಲೆ ಮಾಳೇಟಿರ ತಂಡದ ಜಯ ಜೀವನ್, ವಿಕಾಸ್ ಮುದ್ದಪ್ಪ, ಯಶ್ ಕರುಂಬಯ್ಯ, ಕಿಲನ್ ಮುತ್ತಪ್ಪ ಹಾಗೂ ಕಾಳಪ್ಪ ತಲಾ ಒಂದೊಂದು ಗೋಲು ಗಳಿಸಿ, 5–0 ಅಂತರದ ಗೆಲುವಿಗೆ ಕಾರಣರಾದರು.

ಇದೇ ಬಗೆಯಲ್ಲಿ ಸಚಿನ್ 2, ಪ್ರತಿಕ್ ಕುಶಾಲಪ್ಪ, ಪೂವಣ್ಣ ಹಾಗೂ ಚಿರಾಗ್ ದೇವಯ್ಯ ತಲಾ ಒಂದೊಂದು ಗೋಲು ಗಳಿಸಿ ಕಾಯಪಂಡ 5-0 ಅಂತರದ ಗೆಲುವು ಪಡೆಯಲು ಕಾರಣರಾದರು.

ಉಳಿದಂತೆ, ಸಂತೋಷ್ ಪೂವಯ್ಯ ಹಾಗೂ ನಾಚಪ್ಪ ತಲಾ 1 ಗೋಲು ಗಳಿಸಿ ಪೊನ್ನಿಮಾಡಕ್ಕೆ 2–0 ಅಂತರದ ಗೆಲುವನ್ನು ಕುಂದಿರ ವಿರುದ್ಧ ತಂದುಕೊಟ್ಟರೆ, ರಜೀನ ಬಿದ್ದಪ್ಪ 2, ಸಂದೀಪ್ ಬಿದ್ದಪ್ಪ 1 ಗೋಲು ಗಳಿಸಿ ಕುಟ್ಟಂಡ 3-0 ಅಂತರದಿಂದ ಚಟ್ಟಂಗಡ ವಿರುದ್ಧ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಖ್ಯಾತ್ ಮಂದಣ್ಣ 2, ಚಿರನ್ ಚಂಗಪ್ಪ ಹಾಗೂ ಪ್ರಥಮ್ ಪೊನ್ನಣ್ಣ ತಲಾ 1 ಗೋಲಿನಿಂದ  ಮಂದಂಗಡ 4-0 ಅಂತರದಿಂದ ಐಮಂಡ ವಿರುದ್ಧ, ಮುದ್ದಪ್ಪ, ಗಿರೀಶ್ ಕಾವೇರಪ್ಪ ಹಾಗೂ ಅಚ್ಚಯ್ಯ ತಲಾ 1 ಗೋಲಿನಿಂದ  ಮಂಡೇಡ 3-0 ಅಂತರದಿಂದ ದೇಯಂಡ ವಿರುದ್ಧ ಜಯ ಸಾಧಿಸಿತು.

ಕಾರ್ಯಪ್ಪ 2, ಎ.ಸಿ.ಸೋಮಣ್ಣ ಹಾಗೂ ಸೋಮಯ್ಯ ತಲಾ 1 ಗೋಲಿನಿಂದ ಅಮ್ಮಂಡ 4-0 ಅಂತರದಿಂದ ಮುಂಡಂಡ ವಿರುದ್ಧ, ಬೋಪಣ್ಣ, ಸಜು ಬಿದ್ದಪ್ಪ, ಆಶಿಕ್ ಪೂಣಚ್ಚ ಹಾಗೂ ಭಜನ್ ದೇವಯ್ಯ ಅವರ ತಲಾ 1 ಗೋಲಿನಿಂದ ಸುಳ್ಳಿಮಾಡ 4-0 ಅಂತರದಿಂದ ಚೇಂದ್ರಿಮಾಡ ವಿರುದ್ಧ ಗೆದ್ದವು.

ನೆಹಲ್ ತಮಯ್ಯ ಹಾಗೂ ರೋನಕ್ ತಿಮ್ಮಯ್ಯ ತಲಾ 2 ಗೋಲು ಗಳಿಸಿ ಮೇಕೇರಿರ ತಂಡವು 4-0 ಅಂತರದಲ್ಲಿ ಕೈಬುಲಿರ ವಿರುದ್ಧ ಜಯ ಸಾಧಿಸಲು ಕಾರಣವಾದರೆ, ವರುಣ್ ಗಳಿಸಿದ 2 ಗೋಲುಗಳು ತೆಕ್ಕಡ 2-0 ಅಂತರದಿಂದ ಚೊಟ್ಟೆಯಂಡ ವಿರುದ್ಧ ಗೆಲುವು ಸಾಧಿಸಲು ಕಾರಣವಾದವು.

ಅಭಿಷೇಕ್ ಬೋಪಯ್ಯ, ಕೀರ್ತನ್ ಕುಶಾಲಪ್ಪ ಹಾಗೂ ಪವನ್ ಬೋಪಣ್ಣ ತಲಾ 1 ಗೋಲುಗಳು ಕಾವಾಡಿಚಂಡ 3-0ಯಿಂದ ಕಾಳಚಂಡ ವಿರುದ್ಧ ಜಯ ಗಳಿಸಲು ಕಾರಣವಾಯಿತು.

ಇನ್ನು ಸುನೀಲ್ ಚಂಗಪ್ಪ ಅವರು 1 ಗೋಲು ಗಳಿಸಿದರೂ ಪಾಲೆಂಗಡ ತಂಡ ಗೆಲುವಿನ ದಡ ತಲುಪಲಿಲ್ಲ. ಪವನ್ ಪೂವಯ್ಯ, ಬಿಶನ್ ಬೋಪಣ್ಣ ಹಾಗೂ ರೋಹನ್ ಕುಟ್ಟಪ್ಪ ತಲಾ 1 ಗೋಲುಗಳು ಕನ್ನಂಬಿರದ ಜಯಕ್ಕೆ ಕಾರಣವಾದವು.

ಚಿರಾಗ್ ಕಾರ್ಯಪ್ಪ 2 ಹಾಗೂ ಅಯ್ಯಪ್ಪ 1 ಗೋಲುಗಳ ನೆರವಿನಿಂದ ಚೋಕಿರ 3-1 ಅಂತರದಿಂದ ಜಯಗಳಿಸಿತು. ವಲ್ಲಂಡ ತಂಡದ ಧನೀಶ್ ಪೊನ್ನಣ್ಣ ಅವರು 1 ಗೋಲು ವ್ಯರ್ಥವಾಯಿತು.

ಡಿಮ್‌ಸನ್ ಪಳಂಗಪ್ಪ ಹಾಗೂ ಸಜನ್ ವಸಂತ್ ತಲಾ 1 ಗೋಲು ಗಳಿಸಿದ್ದರಿಂದ ಐತಿಚಂಡ  2-1 ಅಂತರದಿಂದ ನಂದಿನೆರವಂಡ ವಿರುದ್ಧ ಗೆದ್ದಿತು.

ಉಳಿದಂತೆ ಪೆಮ್ಮಯ್ಯ ಅವರ ಏಕೈಕ ಗೋಲು ಪುಟ್ಟಿಚಂಡ 1-0ಯಿಂದ ಕುಟ್ಟೇಟಿರ ವಿರುದ್ಧ, ಲವಿನ್ ಅವರ 1 ಗೋಲು ಬೈರೇಟಿರ 1-0 ಅಂತರದಿಂದ ಪಳೆಯಂಡ (ಹಮ್ಮಿಯಾಲ) ವಿರುದ್ಧ, ಹೃತಿಕ್ ಮುತ್ತಣ್ಣ ಅವರ ಏಕೈಕ ಗೋಲು ಮಾಳೇಟಿರ (ಕುಕ್ಲೂರು) 1–0ಯಿಂದ ಅವರೆಮಾದಂಡ ವಿರುದ್ಧ ಜಯಗಳಿಸಲು ಕಾರಣವಾದವು.

ಉಳಿದಂತೆ, ಅನ್ನಡಿಯಂಡ, ಉಳ್ಳಿಯಡ ತಂಡಗಳು ವಾಕ್‌ಓವರ್ ಪಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.