ADVERTISEMENT

ಕೊಡಗು: ಕಿರಿಯ ಎಂಜಿನಿಯರ್‌ಗೆ ಸೇರಿದ 5 ಸ್ಥಳಗಳಲ್ಲಿ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 5:09 IST
Last Updated 17 ಜೂನ್ 2022, 5:09 IST
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಆರ್‌ಡಿಪಿಆರ್ ಕಚೇರಿ
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಆರ್‌ಡಿಪಿಆರ್ ಕಚೇರಿ   

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೊನ್ನಂಪೇಟೆ ವಿಭಾಗದ ಕಿರಿಯ ಎಂಜಿನಿಯರ್ ಓಬಯ್ಯ ಅವರಿಗೆ‌ ಸೇರಿದ 5 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಇಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದ ಪೊನ್ನಂಪೇಟೆಯ ಕಚೇರಿ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಅವರ ನಿವಾಸ, ಎರಡು ತೋಟದ ಮನೆಗಳು, ಅವರ ಸೋದರ ವಾಸವಿರುವ ಮೈಸೂರು ನಗರದ ಕುಕ್ಕರಹಳ್ಳಿಯ ನಿವಾಸದ ಮೇಲೆ 29 ಮಂದಿಯ ಎಸಿಬಿ ತಂಡವು ಬೆಳಿಗ್ಗೆ 5.45ಕ್ಕೆ ದಾಳಿ ನಡೆಸಿ, ದಾಖಲಾತಿಗಳು, ಹಣ, ಚಿನ್ನಾಭರಣಗಳ ಪರಿಶೀಲನಾ ಕಾರ್ಯ ನಡೆಸಿದೆ‌.

'ಎಲ್ಲ ಬಗೆಯ ತಪಾಸಣೆ ಮುಗಿದ ನಂತರವಷ್ಟೇ ವಿವರ ಖಚಿತವಾಗಿ ಹೇಳಲು ಸಾಧ್ಯ‌‌‌. ಸದ್ಯ ಎಲ್ಲೆಡೆ ತಪಾಸಣೆ ನಡೆದಿದೆ' ಎಂದು ಎಸಿಬಿಯ ಕೊಡಗು ಜಿಲ್ಲಾ ಡಿವೈಎಸ್ಪಿ ರಾಜೇಂದ್ರ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಎಸಿಬಿಯ ಮೈಸೂರು ವಿಭಾಗದ ಎಸ್.ಪಿ.ಸಜಿತ್ ನೇತೃತ್ವದಲ್ಲಿ ಡಿವೈಎಸ್ಪಿ ರಾಜೇಂದ್ರ, ಸದಾನಂದ ತಿಪ್ಪಣ್ಣನವರ, ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಕುಮಾರ್, ಚಿತ್ತರಂಜನ್, ಲಕ್ಷ್ಮೀಕಾಂತ ಸೇರಿದಂತೆ ಒಟ್ಟು 29 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.