ADVERTISEMENT

ಪ್ರಾಕೃತಿಕ ವಿಕೋಪಗಳಿಗಿಂತ ವ್ಯಸನದಿಂದ ಹೆಚ್ಚು ಸಾವು!

ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನದ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ಎಎಸ್‌ಪಿಸುಂದರರಾಜ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 8:54 IST
Last Updated 9 ಆಗಸ್ಟ್ 2024, 8:54 IST
ಮಡಿಕೇರಿಯಲ್ಲಿ ಗುರುವಾರ ನಡೆದ ‘ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಡಾ.ಮಹಾಂತ ಶಿವಯೋಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಮಡಿಕೇರಿಯಲ್ಲಿ ಗುರುವಾರ ನಡೆದ ‘ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಡಾ.ಮಹಾಂತ ಶಿವಯೋಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಮಡಿಕೇರಿ: ‘ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ಸಾವುಗಳಿಗಿಂತ ಮದ್ಯ, ಮಾದಕ ವಸ್ತುಗಳ ವ್ಯಸನ ಸೇರಿದಂತೆ ಸ್ವಯಂಕೃತ ತಪ್ಪುಗಳಿಂದ ಸಂಭವಿಸುವ ಸಾವಿನ ಸಂಖ್ಯೆಯೇ ಅಧಿಕ’ ಎಂದು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ‘ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಪ್ರಾಕೃತಿಕ ವಿಕೋಪದ ಕುರಿತು ಮುನ್ನಚ್ಚರಿಕೆ ವಹಿಸಿದರೂ ಅಲ್ಲಲ್ಲಿ ಆಗಾಗ್ಗೆ ಸಾವು ನೋವುಗಳು ಉಂಟಾಗುತ್ತಿವೆ. ಆದರೆ, ಸ್ವಯಂಕೃತ ತಪ್ಪುಗಳಿಂದ ನಿತ್ಯವೂ ಸಾವುಗಳು ಸಂಭವಿಸುತ್ತಿವೆ ಎಂದು ಅವರು ಅಂಕಿ ಅಂಶಗಳನ್ನು ತೆರೆದಿಟ್ಟರು.

ADVERTISEMENT

ಕಳೆದ 4 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾಗಿ 144 ಮಂದಿ ಮೃತಪಟ್ಟಿದ್ದಾರೆ. 2021 ರಲ್ಲಿ 15 ಮಂದಿ, 2022ರಲ್ಲಿ 50, 2023ರಲ್ಲಿ 47, 2024ರ ಜುಲೈ ಅಂತ್ಯದವರೆಗೆ 34 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಕಾಣೆಯಾದ ಹೆಣ್ಣು ಮಕ್ಕಳ ಪ್ರಕರಣ ಸೇರಿದಂತೆ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು 4 ವರ್ಷಗಳಲ್ಲಿ 125 ಪ್ರಕರಣ ದಾಖಲಾಗಿವೆ. ಇವುಗಳಲ್ಲಿ 61 ಪ್ರಕರಣಗಳು ಪೋಕ್ಸೊ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.

ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಗಳಲ್ಲಿ ಮೂವರಿಗೆ 10 ವರ್ಷಗಳ ಕಾಲ ಕಠಿಣ ಶಿಕ್ಷೆ ಆಗಿದೆ.  ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಇನ್ನಾದರೂ, ದುಶ್ಚಟಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ವಿ.ಸತೀಶ್ ಕುಮಾರ್ ಮಾತನಾಡಿ, ಮಾದಕ ವಸ್ತುಗಳ ಚಟಕ್ಕೆ ತುತ್ತಾದಲ್ಲಿ ಕುಟುಂಬ ಸಂಕಷ್ಟ ಎದುರಿಸಲಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ವಿಜಯ್ ಮಾತನಾಡಿ, ‘ಕೆಲವರು ತಾವು ಕೆಡುವುದರ ಜೊತೆಗೆ ಇತರರನ್ನು ಕೆಡಿಸಲು ಮುಂದಾಗುತ್ತಾರೆ.ಯಾವುದೇ ಕಾರಣಕ್ಕೂ ಹಾದಿ ತಪ್ಪಬಾರದು’ ಎಂದು ಕಿವಿ ಮಾತು ಹೇಳಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ‘ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ್ದಾರೆ. ಇವರ ಜನ್ಮ ದಿನವನ್ನು ಆಗಸ್ಟ್ ತಿಂಗಳಲ್ಲಿ ‘ವ್ಯಸನಮುಕ್ತ ದಿನಾಚರಣೆ’ಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ’ ಎಂದರು.

ಉಪನ್ಯಾಸಕರಾದ ಗೌರಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.