ಮಡಿಕೇರಿ: ಒಂದೆಡೆ ಜಿಲ್ಲಾಡಳಿತ ಸೇರಿದಂತೆ ಅನೇಕ ಇಲಾಖೆಗಳು ‘ನಶಾ ಮುಕ್ತ ಭಾರತ’ದ ಪರಿಕಲ್ಪನೆಯಡಿ ಮದ್ಯ ಮತ್ತು ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಬೃಹತ್ ಜಾಥಾವನ್ನು ಶನಿವಾರ (ಫೆ.7) ನಗರದಲ್ಲಿ ಕೈಗೊಂಡಿದ್ದರೆ, ಮತ್ತೊಂದೆಡೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಚಟ ಬಿಡಿಸುವ ಚಿಕಿತ್ಸೆ ಸದ್ದಿಲ್ಲದೇ ನಡೆಯುತ್ತಿದೆ.
ಆಸ್ಪತ್ರೆಯಲ್ಲಿರುವ ಮಾನಸಿಕ ರೋಗಗಳ ಚಿಕಿತ್ಸಾ ವಿಭಾಗದಲ್ಲಿ ದಿನದ 24 ಗಂಟೆಗಳ ಕಾಲವೂ ಈ ಸೇವೆ ಲಭ್ಯವಿದೆ.
ಒಳರೋಗಿ ಸೇವೆಯೂ ಇಲ್ಲಿ ಲಭ್ಯವಿದ್ದು, ಚಟಕ್ಕೆ ಒಳಗಾದವರು ಹಾಗೂ ಅವರ ಕುಟುಂಬದವರಿಗೆ ಇಚ್ಛಾಶಕ್ತಿ ಇದ್ದರೆ ಶೇ 100ರಷ್ಟು ಚಟ ವಿಮುಕ್ತರಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎಂದು ಅಲ್ಲಿನ ವೈದ್ಯರು ಹೇಳುತ್ತಾರೆ. ಇಚ್ಛಾಶಕ್ತಿ ಇರಲಿ, ಇಲ್ಲದಿರಲಿ, ಚಟಕ್ಕೆ ಒಳಗಾದವರಾದವರು ಅಥವಾ ಅವರ ಕುಟುಂಬದವರು ಅಲ್ಲಿನ ವೈದ್ಯರನ್ನು ಭೇಟಿ ಮಾಡಿದರೆ ಚಟ ಬಿಡಿಸುವ ಮಾರ್ಗದರ್ಶನ ಸಿಗುತ್ತದೆ.
ಆಸ್ಪತ್ರೆಯ ಕೊಠಡಿ ಸಂಖ್ಯೆ 11ರಲ್ಲಿರುವ ಹೊರರೋಗಿ ವಿಭಾಗಕ್ಕೆ ಈಗಾಗಲೇ ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಹಾಸನ ಜಿಲ್ಲೆಯ ಗಡಿಭಾಗಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಿಂದಲೂ ಚಿಕಿತ್ಸೆಗಾಗಿ ಜನರು ಬರುತ್ತಿದ್ದಾರೆ. ಎಲ್ಲರಿಗೂ ಅವರವರ ಚಟದ ಬಗೆ, ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ.
ಚಟದಿಂದ ಕಾಯಿಲೆ ಬರುವುದು ನಿಶ್ಚಿತ. ಕಾಯಿಲೆಗಳು ಬರುವುದಕ್ಕೂ ಮುಂಚೆಯೆ ಚಿಕಿತ್ಸೆ ನೀಡಿದರೆ ಕಾಯಿಲೆಗಳನ್ನು ತಡೆಗಟ್ಟಬಹುದು. ಚಟದಿಂದ ಕೇವಲ ಮಾನಸಿಕ ರೋಗ ಮಾತ್ರವಲ್ಲ ಶಾರೀರಕ ಕಾಯಿಲೆಗಳು ಬರುತ್ತವೆ. ಹಾಗಾಗಿ, ಚಟವನ್ನು ಎಷ್ಟು ಬೇಗ ಬಿಡುತ್ತೇವೋ ಅಷ್ಟೂ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯ:
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ಮಾನಸಿಕ ರೋಗಗಳ ಚಿಕಿತ್ಸಾ ವಿಭಾಗವು ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 11ರಲ್ಲಿದೆ. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ಹೊರರೋಗಿ ಸೇವೆ ಇರುತ್ತದೆ. ನಂತರ, ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆ ಲಭ್ಯವಿರುತ್ತದೆ. ಇಲ್ಲಿ ಮಾತು ಮತ್ತು ಮಾತ್ರೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. 15ರಿಂದ 1 ತಿಂಗಳ ಕಾಲ ಒಳರೋಗಿಯಾಗಿ ದಾಖಲಾಗಬೇಕಾಗುತ್ತದೆ. ನಿತ್ಯವೂ ಕೌನ್ಸೆಲಿಂಗ್ ಸಿಗಲಿದ್ದು, ಮಾತ್ರೆ, ಚುಚ್ಚುಮದ್ದುಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
‘ಜನರು ಕೇವಲ ಖುಷಿಗಾಗಿ ಮದ್ಯ ಮತ್ತು ಮಾದಕವಸ್ತುಗಳನ್ನು ಸೇವಿಸುತ್ತಿಲ್ಲ. ಬದಲಿಗೆ, ತಮ್ಮಲ್ಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ದುಃಖವನ್ನು ಮರೆಯಲು, ಟೆನ್ಷನ್ ಅನ್ನು ಕಡಿಮೆ ಮಾಡಲು ಹೀಗೆ ನಾನಾ ಕಾರಣಗಳಿಗೆ ಮದ್ಯ ಮತ್ತು ಮಾದಕವಸ್ತುಗಳನ್ನು ಸೇವಿಸುತ್ತಾರೆ. ಇದು ಹೆಚ್ಚಾದರೆ ಸೈಕೊಸಿಸ್ ಎಂಬ ಮಾನಸಿಕ ರೋಗ ಬರುವುದು ಮಾತ್ರವಲ್ಲ ದೈಹಿಕ ಕಾಯಿಲೆಗಳೂ ಬರುವ ಸಂಭವ ಇದೆ’ ಎಂದು ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ.ಎನ್.ವಿ.ರೂಪೇಶ್ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.