ಮಡಿಕೇರಿ: ಕೊಡಗು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಗೆ ಬಂದು ಪ್ರತಿಭಟನೆ ಆರಂಭಿಸಿರುವ ಜೇನುಕುರುಬ ಪಂಗಡಕ್ಕೆ ಸೇರಿದ 52 ಕುಟುಂಬಗಳ ಮನವೊಲಿಕೆ ಕಾರ್ಯ ವಿಫಲಗೊಂಡಿದೆ.
‘ಹಲವು ವರ್ಷಗಳ ಹಿಂದೆ ಈ ಪ್ರದೇಶದಿಂದ ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತು’ ಎಂದು ಹೇಳಿರುವ ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವು, ‘ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳಿಗಾಗಿ ಒತ್ತಾಯಿಸಿ ನಮ್ಮ ಮೂಲಸ್ಥಾನಕ್ಕೆ ಬಂದಿದ್ದೇವೆ. ಇಲ್ಲಿ ನಾವು 3 ಗುಡಿಸಲುಗಳನ್ನು ನಿರ್ಮಿಸಿದ್ದೇವೆ. ಇದಕ್ಕೆ ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ ನಾವು ಹಿಂದೇಟು ಹಾಕಿಲ್ಲ’ ಎಂದರು.
ಸ್ಥಳಕ್ಕೆ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಮನವೊಲಿಕೆಗೆ ಪ್ರಯತ್ನಪಟ್ಟರಾದರೂ ಆದಿವಾಸಿಗಳು ಒಪ್ಪಲಿಲ್ಲ.
ಮಂಗಳವಾರದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ನಟ ಚೇತನ್, ‘ಇಡೀ ವ್ಯವಸ್ಥೆಯೇ ಆದಿವಾಸಿಗಳ ವಿರುದ್ಧವಿದೆ. ಆಳುವ ವ್ಯವಸ್ಥೆಯು ಹಣ, ರಾಜಕೀಯ, ಭೂಮಾಲೀಕರ ಪರವಾಗಿಯೇ ಇದೆ’ ಎಂದು ಹರಿಹಾಯ್ದರು.
‘ಸಾವಿರಾರು ವರ್ಷಗಳ ಕಾಲ ಕಾಡಿನಲ್ಲೇ ನೆಲೆಸಿರುವ ಆದಿವಾಸಿಗಳೇ ನಿಜವಾದ ಪರಿಸರವಾದಿಗಳು. ಆದರೆ, ಅವರಿಗೆ ಜಾಗ ಕೊಡದೇ ಕಾಫಿ ಎಸ್ಟೇಟ್ ಮಾಲೀಕರಿಗೆ, ಶ್ರೀಮಂತರಿಗೆ ಜಾಗ ಕೊಡುತ್ತಿದ್ದಾರೆ. ಈ ಅನ್ಯಾಯದ ವ್ಯವಸ್ಥೆಯನ್ನು ವಿರೋಧಿಸಬೇಕು’ ಎಂದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾ ಹಾಗೂ ಎಸಿಎಫ್ ಜೆ.ಅನನ್ಯಕುಮಾರ್ ಅವರು ಮೊಬೈಲ್‌ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.