ADVERTISEMENT

ನಾಪೋಕ್ಲು: ಕಾವೇರಿ ತೀರ್ಥೋದ್ಭವದ ಬೆನ್ನಲ್ಲೆ ಸಂಕ್ರಮಣ ಜಾತ್ರೆ, ಕಣಿಪೂಜೆ

ಬಗೆಬಗೆಯಲ್ಲಿ ಕಾವೇರಿ ಮಾತೆಯ ಆರಾಧನೆ

ಸಿ.ಎಸ್.ಸುರೇಶ್
Published 16 ಅಕ್ಟೋಬರ್ 2022, 19:30 IST
Last Updated 16 ಅಕ್ಟೋಬರ್ 2022, 19:30 IST
ತರಿಂದ ಕಾವೇರಿ ಮಾತೆಗೆ ನಮನ
ತರಿಂದ ಕಾವೇರಿ ಮಾತೆಗೆ ನಮನ   

ನಾಪೋಕ್ಲು: ಕಾವೇರಿ ತೀರ್ಥೊದ್ಭವ ಎಂದರೆ ಕೇವಲ ಒಂದು ದಿನದ ಧಾರ್ಮಿಕ ಕಾರ್ಯವಲ್ಲ. ಅದು ಒಂದು ಆರಂಭವಷ್ಟೇ. ತೀರ್ಥೋದ್ಭವದ ನಂತರವೂ ಶ್ರದ್ಧಾ ಭಕ್ತಿಯಿಂದ ನಡೆಯುವ ಅನೇಕ ಆಚರಣೆಗಳಿವೆ. ಅವುಗಳಲ್ಲಿ ಸಂಕ್ರಮಣ ಜಾತ್ರೆ ಮಹತ್ವದ್ದು.

ತೀರ್ಥೋದ್ಭವದ ಮರುದಿನ ಬಲಮುರಿಯಲ್ಲಿ ನಡೆಯುವ ಮತ್ತೊಂದು ಜಾತ್ರೆಯೇ ‘ಸಂಕ್ರಮಣ ಜಾತ್ರೆ’. ಈ ಸಂಕ್ರಮಣ ಜಾತ್ರೆಯನ್ನು ಕೊಡಗಿನ ಮನೆಮನೆಯಲ್ಲೂ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.

ಮೊದಲನೆಯ ದಿನ ಪೂಜಾ ಸ್ಥಾನಗಳೂ ಸೇರಿದಂತೆ ಗದ್ದೆಗಳಿಗೆ ಬೆತ್ತು ಹಾಕುವುದು ರೂಢಿ. ಸಂಕ್ರಮಣದ ಸಂಕೇತವಾಗಿ ಈ ಬೊತ್ತುಗಳಲ್ಲಿ ಬಳ್ಳಿಗಳನ್ನು ಅಲಂಕಾರಿಕವಾಗಿ ಸಿಲುಕಿಸಿ ನಿಲ್ಲಿಸಲಾಗುತ್ತದೆ. ಇವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ.

ADVERTISEMENT

ತೀರ್ಥೊದ್ಭವದ ಮರುದಿನ ಮನೆಯನ್ನು ಗಂಗೋದಕದಿಂದ ಶುಭ್ರಗೊಳಿಸಿ ಸ್ನಾನಾದಿಗಳ ಬಳಿಕ ಹೊಸ ಬಟ್ಟೆ ತೊಟ್ಟು ‘ಕಣಿ ಪೂಜೆ’ಗೆ ಸಿದ್ದತೆ ನಡೆಯುತ್ತದೆ. ಮುತ್ತೈದೆಯರು ತಳಿಯಕ್ಕಿ ಬೊಳಚ (ತಟ್ಟೆಯಲ್ಲಿ ಅಕ್ಕಿ, ದೀಪ) ಬೆಳಗಿ, ರೇಷ್ಮೆ ವಸ್ತ್ರ ಇರಿಸಿ ತರಕಾರಿಯೊಂದರಲ್ಲಿ ತಲೆ ಕೈಕಾಲು ಆಕೃತಿ ರಚಿಸಿ ಹೂವಿನಿಂದ ಸಿಂಗರಿಸಿ ಮಾತೆ ಕಾವೇರಿಯ ಪ್ರತೀಕವೆಂದು ಪೂಜಿಸುತ್ತಾರೆ. ಇದೇ ಕಣಿಪೂಜೆ. ಈ ರೂಪವನ್ನು ನೆಲ್ಲಕ್ಕಿ ನಡುಬಾಡೆ (ನಡುಮನೆ) ಯಲ್ಲಿರಿಸಿ ಕುಟುಂಬದ ಪ್ರತಿಯೊಬ್ಬರೂ ತಳಿಯಕ್ಕಿ ಬೊಳಕ್ನಿಂದ ಅಕ್ಕಿ ತೆಗೆದು ದೀಪಕ್ಕೆ ಪ್ರೋಕ್ಷಿಸಿ ನಮಿಸುತ್ತಾರೆ. ಹಾಗೆಯೇ, ಕಿರಿಯರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಬಳಿಕ ಮುತ್ತೈದೆಯರು ಬಾವಿ ಬಳಿ ಗಂಗಾ ಪೂಜೆ ಮಾಡಿ ಮನೆಯಲ್ಲಿ ಸಿದ್ದಪಡಿಸಿದ ದೋಸೆಯನ್ನು ಸಾಂಕೇತಿಕವಾಗಿ ಬಾವಿ ಹತ್ತಿರದ ಹಾಗೂ ಗದ್ದೆಯಲ್ಲಿರುವ ಬೊತ್ ನಲ್ಲಿಡುತ್ತಾರೆ. ನಂತರ, ಬಾವಿಯಿಂದ ಹೊಸ ನೀರು ತಂದು ಅಡುಗೆ ಮಾಡುತ್ತಾರೆ. ಪೂಜಿತ ಕಾವೇರಿ ಮಾತೆಯ ಕಲಾಕೃತಿಯನ್ನು ಒಂದು ವಾರ ಕಾಲ ಶ್ರದ್ದಾಭಕ್ತಿಯಿಂದ ಇರಿಸಿಕೊಂಡು ನದಿ ಅಥವಾ ಹಾಲು ಬರುವ ಮರದ ಬುಡದಲ್ಲಿ ವಿಸರ್ಜಿಸಲಾಗುತ್ತದೆ.

ಜಾತ್ರೆಯ ಮುನ್ನಾದಿನದಿಂದಲೇ ಭಾಗಮಂಡಲ - ತಲಕಾವೇರಿಗಳಲ್ಲಿ ಭಕ್ತರು ಜಮಾಯಿಸಿದ್ದು ಇಡೀ ತಿಂಗಳೂ ಯಾತ್ರಾರ್ಥಿಗಳ ದಟ್ಟಣೆಯೇ ಇಲ್ಲಿ ನೆರೆಯುತ್ತದೆ. ಕರ್ನಾಟಕದ ವಿವಿಧ ಭಾಗಗಳಲ್ಲದೆ ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶದ ಮೂಲೆಮೂಲೆಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.