ADVERTISEMENT

ಸೋಮವಾರಪೇಟೆ | ಕೃಷಿ ಭೂಮಿ ‘ಸಿ ಆ್ಯಂಡ್‌ ಡಿ’ ಆಗಿ ಪರಿವರ್ತನೆ: ಕೆ.ಬಿ.ಸುರೇಶ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:18 IST
Last Updated 4 ಸೆಪ್ಟೆಂಬರ್ 2025, 4:18 IST
   

ಸೋಮವಾರಪೇಟೆ: ತಾಲ್ಲೂಕಿನ ಕೃಷಿ ಭೂಮಿಯ ದಾಖಲಾತಿಗಳು ದಿನದಿಂದ ದಿನಕ್ಕೆ ಯಾವುದೇ ಮಾಹಿತಿ ಇಲ್ಲದೆ ಬದಲಾಗುತ್ತಿದ್ದು, ರೈತರು ಆತಂಕಗೊಳ್ಳುವಂತಾಗಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಗ್ರಾಮೀಣ ಭಾಗದ ಕೆಲ ರೈತರ ಪೈಸಾರಿ ಕೃಷಿ ಭೂಮಿಯ ಮ್ಯೂಟೆಷನ್ ಕಾಪಿ (ಎಂ.ಸಿ.)ಯಲ್ಲಿ ಮತ್ತು ಆರ್‌ಟಿಸಿಯಲ್ಲಿ ಸಿ ಆ್ಯಂಡ್ ಡಿ ಎಂದು ದಾಖಲಾಗುತ್ತಿದೆ. ಮ್ಯೂಟೇಷನ್ ಕಾಪಿಯಲ್ಲಿ ಪೈಸಾರಿ ಜಾಗ, ಸಿ ಆ್ಯಂಡ್ ಡಿ ಎಂದು ಪರಿವರ್ತನೆಯಾದರೆ, ಕೃಷಿಕರು ಯಾವುದೇ ಭೂಮಿ ದಾಖಲಾತಿಯನ್ನು ಪಡೆಯಲು ಸಾಧ್ಯವಿಲ್ಲದೆ ಕೈಚೆಲ್ಲಬೇಕಾಗುತ್ತದೆ. ತಾಲ್ಲೂಕಿನ ನೇಗಳ್ಳೆ ಗ್ರಾಮದ ಸರ್ವೆ ನಂ 235, 225/2 ರಲ್ಲಿ 110 ಜಾಗವನ್ನು ಸಿ ಆ್ಯಂಡ್ ಡಿ ಎಂದು ಅರಣ್ಯ ಇಲಾಖೆಯವರು ಮೇಲಾಧಿಕಾರಿಗಳಿಗೆ ವರದಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಕೃಷಿಕರಿಗೆ ಯಾವುದೇ ಮಾಹಿತಿ ನೀಡದೆ, ಕೃಷಿಕರ ಆಹವಾಲು ಸ್ವೀಕರಿಸದೆ, ಏಕಾಏಕಿ ಸಿ ಆ್ಯಂಡ್ ಡಿ ಭೂಮಿ ಎಂದು ಗುರುತು ಮಾಡಿರುವುದು ನಿಯಮ ಬಾಹಿರ ಎಂದು ಹೇಳಿದರು.

ಪೈಸಾರಿ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಲು ಸೆಕ್ಷನ್-4 ಯಿಂದ ಸೆಕ್ಷನ್-17 ತನಕ ವಿವಿಧ ಹಂತಗಳಲ್ಲಿ ಪರಿಶೀಲನೆಯ ನಂತರ ಅರಣ್ಯ ಎಂದು ಘೋಷಣೆಯಾಗಬೇಕು. ಅದರ ನಿಯಮ ಮೀರಿ ಅರಣ್ಯ ಇಲಾಖೆ ಕೃಷಿಕರಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿದರೂ ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡಿದಲ್ಲಿ ರೈತರ ಬದುಕು ಬೀದಿಗೆ ಬರಲಿದೆ ಎಂದರು.

ADVERTISEMENT

ರೈತ ಹೋರಾಟ ಸಮಿತಿ ಕಳೆದ ಹಲವು ವರ್ಷಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತ ಬರುತ್ತಿದೆ. ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರು ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯ ಬಗ್ಗೆ ಸದನದ ಅಧಿವೇಶನದಲ್ಲಿ ಚರ್ಚಿಸಲು ಮುಂದಾದರೆ, ಸ್ಪೀಕರ್ ಅವರು ಸಮಯವನ್ನೇ ಕೊಡುತ್ತಿಲ್ಲ. ಮಲೆನಾಡಿನ ಭಾಗದ ಶಾಸಕರು ಯಾರೂ ಸಹಕರಿಸುತ್ತಿಲ್ಲ. ದೇಶದ ಬೆನ್ನೆಲುಬು ರೈತ. ರೈತರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭ ರಾಜ್ಯದ ಎಲ್ಲಾ ಶಾಸಕರುಗಳು ರೈತರ ಪರವಾಗಿ ನಿಲ್ಲಬೇಕು ಎಂದು ಹೇಳಿದರು.

ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೂಡಲೆ ಉನ್ನತಾಧಿಕಾರಿಗಳು ಮತ್ತು ರೈತ ಮುಖಂಡರನ್ನು ಒಳನ್ನೊಳಗೊಂಡ ಸಮಿತಿ ರಚಿಸಬೇಕು. ಸಮಿತಿ ಪ್ರತಿ ಗ್ರಾಮಗಳಲ್ಲಿ ಸಭೆ ಮಾಡಬೇಕು. ರೈತರ ಸಮಸ್ಯೆಯನ್ನು ಆಲಿಸಬೇಕು. ಜಿಲ್ಲೆಯಲ್ಲಿರುವ ಪೈಸಾರಿ ಜಾಗ, ಸಿ ಆ್ಯಂಡ್ ಡಿ ಭೂಮಿ, ಮೀಸಲು ಅರಣ್ಯ, ದೇವರಕಾಡು, ಊರುಡುವೆ ಎಲ್ಲಿದೆ, ಎಷ್ಟಿದೆ? ಎಂಬುದನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೆ ಇಲಾಖೆಗಳು ಜಂಟಿ ಸರ್ವೆ ನಡೆಸಿ ಜಾಗ ಗುರುತು ಮಾಡಬೇಕು ಎಂದು ಆಗ್ರಹಿಸಿದರು.

ಕಂದಾಯ, ಅರಣ್ಯ ಇಲಾಖೆ ಹಾಗೂ ರೈತರು ಸೇರಿ ಜಂಟಿ ಸರ್ವೆಯಾಗುವ ತನಕ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸರ್ವೆ ಹೆಸರಿನಲ್ಲಿ ಕೃಷಿಕರನ್ನು ಭಯಪಡಿಸಬಾರದು ಎಂದು ಒತ್ತಾಯಿಸಿದರು.

ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೀಸಲು ಅರಣ್ಯವನ್ನು ರೈತರು ಕೇಳುತ್ತಿಲ್ಲ. ಕೃಷಿ ಭೂಮಿಯಲ್ಲಿ ಮರಗಿಡಗಳನ್ನು ಬೆಳೆದು ಪರಿಸರಕ್ಕೆ ರೈತರು ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ ಪೈಸಾರಿ ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡುವುದಕ್ಕೆ ಮುಂದಾದರೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಲೆನಾಡಿನ ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಲೆನಾಡು ಭಾಗದ ಶಾಸಕರುಗಳು ರಾಜಕೀಯ ಮರೆತು ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ಕೊಡಗಿನ ಶಾಸಕರು ರೈತರ ಸಂಕಷ್ಟದ ಬಗ್ಗೆ ಮಾತನಾಡಿದರೆ, ಮಲೆನಾಡಿನ ಶಾಸಕರು ಮೌನಕ್ಕೆ ಶರಣಾಗುವುದು ಸರಿಯಲ್ಲ. ವಿರೋಧ ಪಕ್ಷದವರು ಇದಕ್ಕು ನಮಗೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಬಿ.ಎಂ.ಸುರೇಶ್, ಪದಾಧಿಕಾರಿ ಎಸ್.ಎಂ.ಡಿಸಿಲ್ವಾ ಇದ್ದರು.

‘ವಿರೋಧ ಪಕ್ಷದವರೂ ಮಾತನಾಡಲಿ‘
ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೀಸಲು ಅರಣ್ಯವನ್ನು ರೈತರು ಕೇಳುತ್ತಿಲ್ಲ. ಕೃಷಿ ಭೂಮಿಯಲ್ಲಿ ಮರಗಿಡಗಳನ್ನು ಬೆಳೆದು ಪರಿಸರಕ್ಕೆ ರೈತರು ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ ಪೈಸಾರಿ ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡುವುದಕ್ಕೆ ಮುಂದಾದರೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಲೆನಾಡಿನ ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಲೆನಾಡು ಭಾಗದ ಶಾಸಕರುಗಳು ರಾಜಕೀಯ ಮರೆತು ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು. ವಿಧಾನಸಭಾ ಅಧಿವೇಶನದಲ್ಲಿ ಕೊಡಗಿನ ಶಾಸಕರು ರೈತರ ಸಂಕಷ್ಟದ ಬಗ್ಗೆ ಮಾತನಾಡಿದರೆ, ಮಲೆನಾಡಿನ ಶಾಸಕರು ಮೌನಕ್ಕೆ ಶರಣಾಗುವುದು ಸರಿಯಲ್ಲ. ವಿರೋಧ ಪಕ್ಷದವರು ಇದಕ್ಕು ನಮಗೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.