ಕುಶಾಲನಗರ: ದೇಶದ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತಿದ್ದು, ಕೃಷಿ ಕ್ಷೇತ್ರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಹಾಗೂ ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ಸಹಯೋಗದೊಂದಿಗೆ ಗ್ರಾಮದ ಐಮುಡಿಯಂಡ ಗಣೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ 7ನೇ ವರ್ಷದ ನಾಟಿ ಹಬ್ಬ ಹಾಗೂ ಕೆಸರು ಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ಕ್ಷೇತ್ರದ, ರೈತರ ಅಭ್ಯುದಯಕ್ಕೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೃಷಿಕ ಸಮ್ಮಾನ್ ಮೂಲಕ ಆರ್ಥಿಕ ಸದೃಢತೆ ನೀಡುತ್ತಿದೆ. ರಸಗೊಬ್ಬರ, ಸುಧಾರಿತ ತಳಿಗಳ ಪರಿಚಯ, ಸಹಾಯಧನವನ್ನು ಹೆಚ್ಚಿಸುತ್ತಿದೆ. ಇವುಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ‘ಸಂಸದರು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಿದ ಮೇರೆಗೆ ಕಾಳುಮೆಣಸನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರಿಂದ ಪ್ರತಿ ಕೆ.ಜಿ.ಮೆಣಸಿನ ಮೇಲೆ ₹50 ಹೆಚ್ಚುವರಿ ಹಣ ರೈತರಿಗೆ ಲಭಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಇತ್ತೀಚಿನ ದಿನಗಳಲ್ಲಿ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಕಾಫಿ ತೋಟಗಳು ಶುಂಠಿ ಕೃಷಿಗೆ ಬದಲಾಗುತ್ತಿವೆ. ಗದ್ದೆಗಳನ್ನು ಕೃಷಿಕಾರ್ಯಕ್ಕೆ ಬಳಸಿಕೊಳ್ಳಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.
ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪ್ಪಳ್ಳಿ ರವೀಂದ್ರ ಮಾತನಾಡಿ, ‘ರೈತರೇ ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರದ ಸುಧಾರಣೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಡಬೇಕು. ಯುವ ಜನಾಂಗ ಕೃಷಿಯತ್ತ ಹೆಚ್ಚು ಆಸಕ್ತಿ ವಹಿಸಬೇಕು’ ಎಂದರು.
ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿದರು. ಯಂಗ್ ಇಂಡಿಯನ್ ಫಾರ್ಮರ್ಸ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐಮುಡಿಯಂಡ ಶರತ್, ಉದ್ಯಮಿ ಪುರುಷೋತ್ತಮ್ ರೈ, ಹುದುಗೂರು ಗ್ರಾಮ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಗೌಡ, ಉದ್ಯಮಿ ಕೀರ್ತಿ ಗೌಡ, ಚಂದ್ರಶೇಖರ್ ಹೇರೂರು, ಮಹೇಶ್ ಗುರಪ್ಪ, ಯಿಫಾ ಸಂಘಟನೆ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ನಿರ್ದೇಶಕ ಆದರ್ಶ್ ತಮ್ಮಯ್ಯ ಪಾಲ್ಗೊಂಡಿದ್ದರು.
ಕ್ರೀಡಾಕೂಟ ಹಾಗೂ ನಾಟಿ ಕಾರ್ಯಕ್ಕೆ ಗದ್ದೆ ನೀಡಿದ ಹುದುಗೂರಿನ ಐಮುಡಿಯಂಡ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ವಿಜಯ ಹಾನಗಲ್ ಸ್ವಾಗತಿಸಿ, ವಂದಿಸಿದರು.
ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಕೃಷಿ ಕ್ಷೇತ್ರದಿಂದ ವಿಮುಖಗೊಂಡು ಉದ್ಯೋಗ ಅರಸಿಕೊಂಡು ನಗರ ಸೇರುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಕೃಷಿ ಕ್ಷೀಣಿಸುತ್ತಿದೆಯದುವೀರ್ ಒಡೆಯರ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.