ADVERTISEMENT

‘ಆಲೀರ ಕಪ್’ ಕ್ರಿಕೆಟ್ ಟೂರ್ನಿ‌: ಬೆಲಿಯತ್ ಕಾರಂಡ ತಂಡ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:21 IST
Last Updated 8 ಮೇ 2025, 15:21 IST
ಗೋಣಿಕೊಪ್ಪಲು ಬಳಿಯ ಮಾಪಿಳ್ಳೆತೋಡಿನಲ್ಲಿ ನಡೆದ ಅಲಿರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬೆಲಿಯತ್ ಕಾರಂಡ ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು.
ಗೋಣಿಕೊಪ್ಪಲು ಬಳಿಯ ಮಾಪಿಳ್ಳೆತೋಡಿನಲ್ಲಿ ನಡೆದ ಅಲಿರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬೆಲಿಯತ್ ಕಾರಂಡ ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು.   

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಮಾಪಿಳ್ಳೆತೋಡುವಿನಲ್ಲಿ ನಡೆದ ‘ಆಲೀರ ಕಪ್’ ಕ್ರಿಕೆಟ್ ಟೂರ್ನಿಯಲ್ಲಿ ಬೆಲಿಯತ್ ಕಾರಂಡ ತಂಡ ಜಯಗಳಿಸಿದ್ದು, ‘ಚಾಂಪಿಯನ್ ಪಟ್ಟ’ ಮುಡಿಗೇರಿಸಿಕೊಂಡಿತು.

ಎಂಟು ದಿನ ನಡೆದ ಪಂದ್ಯಾವಳಿಯಲ್ಲಿ ಕೊಡವ ಮುಸ್ಲಿಂ ಕುಟುಂಬಗಳ 70 ತಂಡಗಳು ಪಾಲ್ಗೊಂಡು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಿದವು. ಆಲೀರ ಕುಟುಂಬಸ್ಥರ ಗದ್ದೆಯಲ್ಲಿ ನೂತನವಾಗಿ ನಿರ್ಮಿಸಿದ್ದ ಮೈದಾನದಲ್ಲಿ, ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರ್ ಸಹಭಾಗಿತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.

 ಟೂರ್ನಿಯಲ್ಲಿ ಅತಿಥೇಯ ಆಲೀರ ‘ಎ’ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಲೀರ ‘ಎ’ ತಂಡ ನಿಗದಿತ 6 ಓವರ್‌‌‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 24 ರನ್‌‌‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. 25 ರನ್‌‌‌ಗಳ ಗುರಿ ಬೆನ್ನಟ್ಟಿದ ಬೆಲಿಯತ್ ಕಾರಂಡ ತಂಡ ಕೇವಲ 3.5 ಓವರ್‌‌‌‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ADVERTISEMENT

 ಮುಖ್ಯಅತಿಥಿಯಾಗಿದ್ದ ಹೊದ್ದೂರು ಗ್ರಾಮ ಪಾಚಾಯಿತಿ ಅಧ್ಯಕ್ಷ ಹಂಝ ಕೊಟ್ಟಮುಡಿ ಮಾತನಾಡಿ,‘ಕೊಡಗು ಜಿಲ್ಲೆ ಸೇನೆ ಮತ್ತು ಕ್ರೀಡೆಗೆ ಹೆಸರುವಾಸಿಯಾಗಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಲಿ’ ಎಂದು ಆಶಿಸಿದರು.

ಅಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷ ಎರ್ಮು ಹಾಜಿ ಮಾತನಾಡಿ, ‘ಶಾಸಕ ಎ.ಎಸ್.ಪೊನ್ನಣ್ಣ ಅವರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ಸಚಿವರು, ಮಡಿಕೇರಿ ಶಾಸಕರನ್ನು ಕ್ರೀಡಾಕೂಟಕ್ಕೆ ಆಹ್ವಾನಿಸಿದ್ದೆವು. ಆದರೆ, ಅವರು ಗೈರು ಹಾಜರಾಗಿರುವುದು ಬೇಸರ ತಂದಿದೆ. ಪಂದ್ಯಾವಳಿ ಯಶಸ್ಸಿಗೆ ಆಲೀರ ಕುಟುಂಬದ ಸದಸ್ಯರು ಹಗಲು ರಾತ್ರಿ ಎನ್ನದೆ ಶ್ರಮಿಸಿ ಮಳೆ ಅಡಚಣೆ ನಡುವೆಯೂ ಅಚ್ಚುಕಟ್ಟಾಗಿ ಕ್ರೀಡಾಕೂಟ ನಡೆಸಿರುವುದು ಸಂತಸ ತಂದಿದೆ’ ಎಂದರು.

ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಆನೇಕಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಲೀರ ಸಲ್ಮಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಲೀರ ಕುಟುಂಬದ 30 ಸಾಧಕ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಜಮ್ಮ ಮುಸ್ಲಿಂ ಲೋಗೋವನ್ನು ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಧ್ಯಕ್ಷ ಕುವೆಲರ ಅನೀಸ್ ಅವರಿಗೆ ಹಸ್ತಾಂತರಿಸಲಾಯಿತು.

ಆಲೀರ ಕುಟುಂಬ ತಕ್ಕಮುಖ್ಯಸ್ಥ ಕುಟ್ಟಿ ಆಲಿ, ಆಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷ ಆಲೀರ ಪವಿಲ್ ಉಸ್ಮಾನ್, ಉಪಾಧ್ಯಕ್ಷರಾದ ಆಲೀರ ಅಹಮದ್ ಹಾಜಿ, ಆಲೀರ ಅಬ್ದುಲ್ಲ, ಮಾಪಿಳೆತೋಡು ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಆಲೀರ ಪಿ. ಆಲಿ, ಕ್ರೀಡಾ ಸಮಿತಿ ಸಂಚಾಲಕ ಆಲೀರ ನಸೀರ್ ಬಾಜಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ. ಎಚ್. ಹನೀಫ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಕೋಳುಮಂಡ ರಫೀಕ್, ಪೊನ್ನಂಪೇಟೆ ವಕೀಲರಾದ ಸುಳ್ಳಿಮಾಡ ಧ್ಯಾನ್ ದೇವಯ್ಯ, ಬೇಗೂರು ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಬೊಳ್ಳಂಗಡ ದಾದು ಪೂವಯ್ಯ, ವಿರಾಜಪೇಟೆ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಅಲೀರ ಉಸ್ಮಾನ್, ನಿವೃತ್ತ ಅಬಕಾರಿ ಇನ್‌‌‌ಸ್ಪೆಕ್ಟರ್ ಆಲೀರ ಹುಸೇನ್, ಮುಂಬೈನ ಉದ್ಯಮಿ ಅಕ್ಕಳತಂಡ ಮೊಯ್ದು, ಅಲೀರ ಸಾದಲಿ ಅಂಬಟ್ಟಿ, ಕಾಟ್ರಕೊಲ್ಲಿ ವಕ್ಫ್ ಬೋರ್ಡ್ ಸದಸ್ಯ ಅಲೀರ ಅಬ್ದುಲ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಕೀಂ, ಅಲೀರ ಕ್ರಿಕೆಟ್ ಕ್ರೀಡಾಕೂಟದ ಸದಸ್ಯರು ಉಪಸ್ಥಿತರಿದ್ದರು. ಟೂರ್ನಿಯಲ್ಲಿ ಕೊಡವ ಮುಸ್ಲಿಂ ಕುಟುಂಬಗಳ 70 ತಂಡಗಳು ಪಾಲ್ಗೊಂಡಿದ್ದವು.

ಆತಿಥೇಯ ಅಲಿರ ಎ ತಂಡ ದ್ವಿತೀಯ ಸ್ಥಾನ ಪಡೆಯಿತು

ವೈಯಕ್ತಿಕ ಪ್ರಶಸ್ತಿ:

ಲೆಜೆಂಡ್ ಪ್ಲೇಯರ್ ಆಫ್ ದಿ ಟೂರ್ನ್ ಮೆಂಟ್ ಆಗಿ ರಶೀದ್ ಕುಪೋಡಂಡ ಅಪ್ ಕಮಿಂಗ್ ಪ್ಲೇಯರ್ ಆಗಿ ಅಶು ಕನ್ನಡಿಯಂಡ ಬೆಸ್ಟ್ ವಿಕೆಟ್ ಕೀಪರ್ ಆಗಿ ರಿಯಾಜ್ ಬೆಲಿಯಾತ್ ಕಾರಂಡ ಬೆಸ್ಟ್ ಬೌಲರ್ ಆಗಿ ರವುಫ್ ಬೆಸ್ಟ್ ಫೀಲ್ಡರ್ ಆಗಿ ಸಂಶು ವೈಕೊಳಂಡ ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಅಫ್ರೋಜ್ ಕಿಕ್ಕರೆ ಅಂಬಟ್ಟಿ ಮ್ಯಾನ್ ಆಫ್ ದಿ ಮ್ಯಾಚ್ ಆಫ್ ದಿ ಮ್ಯಾಚ್ ಆಗಿ ರಶೀದ್ ಬೆಲಿಯತ್ ಕಾರಂಡ ಪ್ರಶಸ್ತಿ ಪಡೆದುಕೊಂಡರು. ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಯಾಗಿ ಉನೈಜ್ ಗೆ ಬೈಕ್ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.