ADVERTISEMENT

ಎರಡೇ ದಿನದಲ್ಲಿ ಕದ್ದ ಎಲ್ಲ ಚಿನ್ನಾಭರಣ ವಶ!

ಭಾಗಮಂಡಲ ವ್ಯಾಪ್ತಿಯಲ್ಲಿ ಆತಂಕ ಮೂಡಿಸಿದ್ದ ಕಳ್ಳತನ, ನಾಪೋಕ್ಲು, ಭಾಗಮಂಡಲ ಪೊಲೀಸರ ಕಾರ್ಯಕ್ಷಮತೆಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 5:46 IST
Last Updated 17 ಏಪ್ರಿಲ್ 2024, 5:46 IST
ಆರೋಪಿಗಳಿಂದ ವಶಪಡಿಸಿಕೊಂಡ ಎಲ್ಲ ಚಿನ್ನಾಭರಣಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ
ಆರೋಪಿಗಳಿಂದ ವಶಪಡಿಸಿಕೊಂಡ ಎಲ್ಲ ಚಿನ್ನಾಭರಣಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ   

ಮಡಿಕೇರಿ: ಹಲವು ವರ್ಷಗಳ ನಂತರ ಭಾಗಮಂಡಲ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನದ ‍ಪ‍್ರಕರಣವನ್ನು ಕೇವಲ ಎರಡೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಕದ್ದ ಎಲ್ಲ ಚಿನ್ನಾಭರಣಗಳ ಸಮೇತ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಈ ಮೂಲಕ ಹಲವು ವರ್ಷಗಳ ನಂತರ ಮತ್ತೆ ಕಳ್ಳತನ ಆರಂಭವಾಗಿದೆ ಎಂದು ಚಿಂತೆಗೀಡಾಗಿದ್ದ ಜನತೆ ನಿರಾಳರಾಗಿದ್ದಾರೆ.

ಐಯ್ಯಂಗೇರಿ ಗ್ರಾಮದ ನಿವಾಸಿ 26 ವರ್ಷದ ಮಹಿಳೆ ಹಾಗೂ ಕೆ.ಕೆ.ಮಿದ್‌ಲಾಜ್ ಬಂಧಿತರು. ಇವರಿಂದ ಕಳವು ಮಾಡಿದ್ದ 177 ಗ್ರಾಂ ತೂಕದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಹಾಗೂ 2 ಮೊಬೈಲ್‌ ಸೇರಿ ಒಟ್ಟು ₹ 14.05 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾಗಮಂಡಲ ವ್ಯಾಪ್ತಿಯ ಐಯ್ಯಂಗೇರಿ ಗ್ರಾಮದ ನಿವಾಸಿ ಕೆ.ಎಚ್.ಜಲೀನಾ ಅವರು ಏಪ್ರಿಲ್ 12ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ 13ರಂದು ಬಂದು ನೋಡಿದಾಗ ಮನೆಯ ಹಿಂಬಾಗಿಲು ಒಡೆದು, ಬೀರುವಿನ ಬೀಗ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಡೆದ ಕಳ್ಳತನದಿಂದ ಭಾಗಮಂಡಲ ವ್ಯಾಪ್ತಿಯ ಜನರು ಬೆಚ್ಚಿದ್ದರು. ಬರಗಾಲದಿಂದಾಗಿ ಕಳ್ಳರ ಗುಂಪು ಬಂದಿರಬಹುದೇ ಎಂಬ ಆತಂಕ ತೋಟದ ಮನೆಗಳಲ್ಲಿದ್ದವರನ್ನು ಕಾಡತೊಡಗಿತ್ತು.

ಶ್ವಾನದಳ ಹಾಗೂ ಬೆರಳಚ್ಚು ತಂಡದೊಂದಿಗೆ ಸ್ಥಳಕ್ಕೆ ಬಂದ ಪೊಲೀಸರ ತಂಡ ಮಾಹಿತಿ ಕಲೆ ಹಾಕಿತು. ಕೂಲಂಕಶವಾಗಿ ವಿಚಾರಣೆ ನಡೆಸಿದಾಗ ಮನೆಯ ಸಮೀಪ‍ವೇ ವಾಸವಿದ್ದ ಹಾಗೂ ಜಲೀನಾ ಅವರೊಂದಿಗೆ ಸ್ನೇಹದಿಂದ ಇದ್ದ ಮಹಿಳೆಯೇ ಆರೋಪಿ ಎಂಬುದು ಗೊತ್ತಾಯಿತು. ಈಕೆ ಮಿದ್‌ಲಾಜ್ ಎಂಬಾತನೊಂದಿಗೆ ಸೇರಿ ಕಳ್ಳತನ ಮಾಡಿರುವುದು ತಿಳಿದು, ಆರೋಪಿಗಳಿಂದ ಕದ್ದಿದ್ದ ಎಲ್ಲ ಚಿನ್ನಾಭರಣಗಳನ್ನೂ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ಸುಂದರ್‌ರಾಜ್ ಹಾಗೂ ಡಿವೈಎಸ್‌ಪಿ ಎಸ್.ಮಹೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಲ್.ಅರುಣ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪಿಎಸ್‌ಐಗಳಾದ ಶೋಭಾ ಲಮಾಣಿ, ಮಂಜುನಾಥ, ಎಎಸ್‌ಐ ಕೆ.ಕೆ.ದಿನೇಶ್, ಸಿಬ್ಬಂದಿಯಾದ ರಾಮಪ್ಪ, ಲೋಕೇಶ, ಮಧುಸೂದನ, ವಸಂತ, ಪ್ರೇಮ್‌ಕುಮಾರ್, ಸುನಿಲ್‌ಕುಮಾರ್, ಮಹದೇವಸ್ವಾಮಿ, ಪರಮೇಶ, ನಾಗರಾಜ ಕಡಗಣ್ಣನವರ್, ನಿಂಗಪ್ಪ, ಚೋಂದಮ್ಮ, ಶ್ರೀಶೈಲ ಬಿರಾದಾರ್, ಉಮೇಶ್, ಶರೀಫ್, ರಾಜೇಶ್, ಪ‍್ರವೀಣ್ ಕಾರ್ಯಾಚರಣೆ ತಂಡದಲ್ಲಿದ್ದರು.

ಪೊಲೀಸರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.