ADVERTISEMENT

ಕೊಡಗು | ‘ಅಮೃತ್ –2’ ಯೋಜನೆ ಕಾಮಗಾರಿ: ಎಲ್ಲೆಡೆ ದೂಳು, ನಿವಾಸಿಗಳ ಪರದಾಟ

ಹಳ್ಳ ತೆಗೆದು ಸಮರ್ಪಕವಾಗಿ ಮುಚ್ಚುತ್ತಿಲ್ಲ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 4:25 IST
Last Updated 17 ಮಾರ್ಚ್ 2025, 4:25 IST
<div class="paragraphs"><p>ಸೋಮವಾರಪೇಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ತೆಗೆದಿರುವ ಗುಂಡಿಯ ಮಣ್ಣು ಮತ್ತು ಸಣ್ಣ ಕಲ್ಲು ರಸ್ತೆಯ ಮೇಲೆ ಚೆಲ್ಲಾಡಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿದೆ.&nbsp;</p></div>

ಸೋಮವಾರಪೇಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ತೆಗೆದಿರುವ ಗುಂಡಿಯ ಮಣ್ಣು ಮತ್ತು ಸಣ್ಣ ಕಲ್ಲು ರಸ್ತೆಯ ಮೇಲೆ ಚೆಲ್ಲಾಡಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿದೆ. 

   

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ನಡೆಯುತ್ತಿರುವ ‘ಅಮೃತ್ –2’ ಯೋಜನಾ ಕಾಮಗಾರಿಯಿಂದ ಎಲ್ಲೆಡೆ ದೂಳಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲೇ ಹದಗೆಟ್ಟಿದ್ದ ರಸ್ತೆಗಳು ಇನ್ನಷ್ಟು ಹಾಳಾಗಿವೆ. ವೈಜ್ಞಾನಿಕವಾದ ಕಾಮಗಾರಿ ನಡೆಸಬೇಕಿತ್ತು ಎಂಬ ಅಭಿಪ್ರಾಯ ನಾಗರಿಕರಿಂದ ವ್ಯಕ್ತವಾಗಿದೆ.

ಮುಖ್ಯವಾಗಿ, ನಗರದಲ್ಲಿ ಬಹುಪಾಲು ಕಿರಿದಾದ ರಸ್ತೆಗಳೇ ಇವೆ. ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ನೀಡಲು ಕೊಳವೆ ಹೂಳಲು ರಸ್ತೆಯ ಬದಿಯನ್ನು ಅಗೆಯಲಾಗುತ್ತಿದೆ. ಆದರೆ, ಮುಂಚಿತವಾಗಿ ಮಾಹಿತಿ ನೀಡುತ್ತಿಲ್ಲ. ಅಗೆಯುವಾಗ ಹಲವೆಡೆ ಹಾಲಿ ಇರುವ ನೀರಿನ ಕೊಳವೆ ಒಡೆದು ನೀರು ಸರಬರಾಜಾಗದೇ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಈ ವಿಷಯವನ್ನು ನಗರಸಭೆ ಸದಸ್ಯರು ಮೊನ್ನೆಯಷ್ಟೇ ನಡೆದ ಬಜೆಟ್‌ ಸಭೆಯಲ್ಲೂ ಪಕ್ಷಾತೀತವಾಗಿ ಪ್ರಸ್ತಾಪಿಸಿದರು. ಎಲ್ಲರೂ ಒಕ್ಕೊರಲಿನಿಂದ ಕ್ರಮಬದ್ಧವಾಗಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಟೆಂಡರ್ ಪಡೆದವರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದರು.

ರಸ್ತೆ ಬದಿಯನ್ನು ಅಗೆದ ನಂತರ ನಿವಾಸಿಗಳಿಗೆ ಮನೆಗೆ ತೆರಳಲು ಇಲ್ಲವೇ ಮನೆಯಿಂದ ಹೊರಬರಲು ಸಣ್ಣ ಹಲಗೆಯನ್ನೂ ಹಳ್ಳಕ್ಕೆ ಹಾಕುತ್ತಿಲ್ಲ. ಇದರಿಂದ ವಯಸ್ಸಾದವರು, ಮಕ್ಕಳು, ಮಹಿಳೆಯರು, ರೋಗಿಗಳು ಹಳ್ಳ ದಾಟಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತೆಗೆದ ಹಳ್ಳವನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಎಲ್ಲೆಡೆ ದೂಳು ಆವರಿಸಿದೆ. ದೂಳಿನಿಂದ ಜನರು ಕಂಗೆಟ್ಟಿದ್ದಾರೆ. ಮೊದಲಿನಂತೆ ರಸ್ತೆ ಆಗದೇ ಇರುವುದು ಎಲ್ಲೆಡೆ ಕಂಡು ಬರುತ್ತಿದೆ. ಒಂದು ವೇಳೆ ಮಳೆಯಾದರೆ ಸಾಕು ಮಣ್ಣು ಮತ್ತಷ್ಟು ಕುಸಿದು, ಹಳ್ಳವಾಗಲಿದೆ ಎಂಬ ಆತಂಕವೂ ಜನರನ್ನು ಕಾಡುತ್ತಿದೆ.

ಮೊದಲು ರಸ್ತೆ ಹೇಗಿತ್ತೋ ಹಾಗೆಯೇ ರಸ್ತೆಯನ್ನು ಮಾಡಿಕೊಡಬೇಕು ಎಂಬ ಒತ್ತಾಯವೂ ಜನರದ್ದಾಗಿದೆ.

ಸೋಮವಾರಪೇಟೆಯಲ್ಲೂ ಸಮಸ್ಯೆ

ಸೋಮವಾರಪೇಟೆ: ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ‘ಅಮೃತ್ 2’ ಕಾಮಗಾರಿ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದು, ಪಟ್ಟಣ ಪಂಚಾಯಿತಿ ಹಲವು ರಸ್ತೆಗಳು ದೂಳುಮಯವಾಗಿದೆ.

ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲೂ ನೀರು ಸರಬರಾಜು ಪೈಪ್ ಅಳವಡಿಸಲು ಗುಂಡಿ ಮಾಡಿ, ಪೈಪ್ ಅಳವಡಿಸಲಾಗುತ್ತಿದೆ. ಆದರೆ, ಅವುಗಳನ್ನು ಸರಿಯಾಗಿ ಮುಚ್ಚದ ಕಾರಣ ಸಮಸ್ಯೆಯಾಗಿದೆ. ಮಣ್ಣು ರಸ್ತೆ, ಪಕ್ಕದ ಚರಂಡಿಯನ್ನು ಆಕ್ರಮಿಸಿಕೊಳ್ಳುತ್ತಿದ್ದು, ರಸ್ತೆಯ ಮೇಲೆ ಬಿದ್ದ ಮಣ್ಣಿನ ಮೇಲೆ ವಾಹನಗಳು ಸಂಚರಿಸುವುದರಿಂದ ಪುಡಿಯಾಗಿ, ಗಾಳಿ ಬಂದ ಸಂದರ್ಭ ಹಾರುತ್ತಿದೆ. ಇದರಿಂದ ಮನೆಗಳ ಬಾಗಿಲು ತೆರೆಯದಂತ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯಲ್ಲಿ ಮಣ್ಣು ಬೀಳುತ್ತಿರುವುದರಿಂದ ತ್ಯಾಜ್ಯ ನೀರು ಸರಿಯಾಗಿ ಹರಿಯದೆ, ಸಮಸ್ಯೆಯಾಗಿದೆ.

ರಸ್ತೆಯಲ್ಲಿ ಗುಂಡಿಯ ಮಣ್ಣು ಮತ್ತು ಕಲ್ಲುಗಳು ಚೆಲ್ಲಾಡಿರುವುದರಿಂದ ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ನಡೆದುಕೊಂಡು ರಸ್ತೆಗಳಲ್ಲಿ ಸಂಚರಿಸುವ ಸಂದರ್ಭ ವಾಹನ ಬಿದ್ದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಬಹುದಾಗಿದ್ದು, ಕೂಡಲೇ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಡಿಕೇರಿಯಲ್ಲಿ ಅಮೃತ್–2 ಯೋಜನೆಗಾಗಿ ರಸ್ತೆಬದಿಯನ್ನು ಅಗೆದಿರುವುದು

ಕೂಡಲೇ ಗುಂಡಿ ಮುಚ್ಚುವ ಕೆಲಸ ಆಗಲಿ

ಈಗಾಗಲೇ ಸಂಬಂಧಿಸಿದ ಅಧಿಕಾರಿಗಳನ್ನು ಪಂಚಾಯಿತಿ ಸಭೆಯಲ್ಲಿ ಕರೆಸಿ ಸೂಕ್ತ ರೀತಿಯಲ್ಲಿ ಗುಂಡಿ ಮುಚ್ಚುವಂತೆ ಸೂಚಿಸಲಾಗಿದೆ. ಆದರೆ ಇಂದಿಗೂ ಗುಂಡಿ ಮುಚ್ಚುವ ಕೆಲಸವಾಗಿಲ್ಲ. ರಸ್ತೆ ಬದಿಯಲ್ಲಿ ತೆಗೆದಿರುವ ಗುಂಡಿಗಳನ್ನು ಸರಿಯಾಗಿ ಮುಚ್ಚಿ ಡಾಂಬರ್ ಹಾಕುವ ಕೆಲಸವೂ ಗುತ್ತಿಗೆದಾರರದ್ದಾಗಿದ್ದು ಕೂಡಲೇ ಗುಂಡಿ ಮುಚ್ಚುವ ಕೆಲಸ ಅವರಿಂದಾಗಬೇಕು - ಜಯಂತಿ ಶಿವಕುಮಾರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ.

ಸೂಚನೆ ನೀಡುವೆ

ಗುತ್ತಿಗೆದಾರರನ್ನು ಕರೆಸಿ ಎಲ್ಲೆಲ್ಲಿ ಹೇಗೆಗೆ ಗುಂಡಿ ತೆಗೆಯಬೇಕು ಹೇಗೆ ಕಾಮಗಾರಿ ನಡೆಸಬೇಕು ಎಂದು ನಮ್ಮ ಎಂಜಿನಿಯರ್‌ಗಳು ಹೇಳಿದ್ದಾರೆ. ನಾನೂ ಸಹ ಅವರಿಗೆ ಸೂಚನೆ ನೀಡುವೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಸೂಚನೆ ನೀಡುವೆ - ರಮೇಶ್ ಮಡಿಕೇರಿ ನಗರಸಭೆ ಪೌರಾಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.