
ಮಡಿಕೇರಿ: ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಬಹು ಮಹತ್ವಕಾಂಕ್ಷೆಯ ಅಮೃತ್ –2 ಯೋಜನೆಯ ಅನುಷ್ಠಾನದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಇನ್ನೂ ತಪ್ಪಿಲ್ಲ. ಅಗೆದ ರಸ್ತೆಬದಿಗಳು ಹಾಗೆಯೇ ಇದ್ದು, ಮೊದಲಿನ ಸ್ಥಿತಿಗೆ ಇನ್ನೂ ತಂದಿಲ್ಲ.
ಈ ಮೊದಲು ರಸ್ತೆ ಹೇಗಿತ್ತೋ ಅದೇ ಸ್ಥಿತಿಗೆ ತರಬೇಕು ಎಂಬ ನಿಯಮ ಇದೆ. ಹಾಗಿದ್ದರೂ, ಯೋಜನೆಗಾಗಿ ಭೂಮಿಯನ್ನು ಅಗೆದ ನಂತರ ಸುಸ್ಥಿತಿಗೆ ತಾರದಿರುವುದು ನಗರದಲ್ಲಿ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರಸಭೆಯ ಬೇರೆ ಸದಸ್ಯರ ವಾರ್ಡ್‌ಗಳ ಸ್ಥಿತಿ ಬೇಡ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಾರ್ಡ್‌ಗಳ ಸ್ಥಿತಿ ನೋಡಿದರೆ ಸಾಕು ಅಮೃತ್–2 ಯೋಜನೆಯಿಂದ ಸಾಮಾನ್ಯ ಜನರಿಗೆ ಆಗಿರುವ ತೊಂದರೆಗಳು ಕಾಣಿಸುತ್ತವೆ. ಇನ್ನು ಇವರಿಬ್ಬರ ವಾರ್ಡ್‌ಗಳನ್ನು ನೋಡಿದ ಬಳಿಕ ಉಳಿದ ವಾರ್ಡ್‌ಗಳನ್ನು ನೋಡುವುದೇ ಬೇಡ. ಬಹುತೇಕ ಎಲ್ಲೆಡೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದೇ ಸಾರ್ವಜನಿಕರು ದೂರುತ್ತಿದ್ದಾರೆ.
ಈಗ ಅಧ್ಯಕ್ಷೆ ಕಲಾವತಿ ಅವರ ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಹೇಗಿದೆ ಎಂದರೆ, ರಸ್ತೆಯ ಒಂದು ಬದಿ ಅಗೆದು ಪೈಪ್ ಹಾಕಿ ಮುಚ್ಚಿದ್ದಾರೆ. ರಸ್ತೆ ಕತ್ತರಿಸುವುದಕ್ಕೂ ಮುನ್ನ ಇದ್ದ ಸ್ಥಿತಿಗೆ ತಂದಿಲ್ಲ. ಮಣ್ಣನ್ನೂ ಹದವಾಗಿ ಹಾಕಿಲ್ಲ. ಮಳೆಯಿಂದ ಕೆಸರುಮಯವಾಗಿ ವಾಹನಗಳು ಇದರಲ್ಲಿ ಹೂತು ಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿಯೇ ಮತ್ತೊಂದು ಬದಿಯನ್ನು ಸಹ ಅಗೆಯಲಾಗುತ್ತಿದೆ. ಇನ್ನು ಚಿಕ್ಕಚಿಕ್ಕ ರಸ್ತೆಯಲ್ಲಿ ಸಂಚರಿಸುವವರ ಸ್ಥಿತಿಯಂತೂ ಶೋಚನೀಯ ಹಂತಕ್ಕೆ ತಲುಪಿದೆ.
ರಸ್ತೆ ಎಲ್ಲವೂ ಕೆಸರಿನಿಂದ ರಾಡಿಯಾಗಿದೆ. ದಾರಿಹೋಕರು ನಡೆಯಬೇಕಾದರೆ ಬಹಳ ಜೋಪಾನವಾಗಿ ನಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮುತ್ತಪ್ಪ ದೇವಾಲಯದ ರಸ್ತೆಯ ಒಂದು ಬದಿ ಅಗೆದು ಮುಚ್ಚಲಾಗಿದೆ. ಸಮರ್ಪಕವಾಗಿ ಮುಚ್ಚದ ಕಾರಣ ಇಲ್ಲಿ ನಡೆದಾಡಲು ಸಾಧ್ಯವೇ ಆಗದ ಸ್ಥಿತಿ ಇದೆ. ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಿದೆ. ಅಬ್ಬಿಫಾಲ್ಸ್‌ಗೆ ಸಂಪರ್ಕ ಬೆಸೆಯುವ ಪ್ರಮುಖ ರಸ್ತೆ ಇದಾಗಿರುವುದರಿಂದ ಸಹಜವಾಗಿಯೆ ಹೆಚ್ಚಿನ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಅತ್ತ ಪಾದಚಾರಿ ಮಾರ್ಗದಲ್ಲೂ ನಡೆಯಲಾಗದೆ ಇತ್ತ ರಸ್ತೆಯಲ್ಲಿ ಆತಂಕದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಉಪಾಧ್ಯಕ್ಷರ ವಾರ್ಡ್‌ನ ಸ್ಥಿತಿಯಂತೂ ಯಾರಿಗೂ ಹೇಳುವುದೇ ಬೇಡ ಎನ್ನಿಸುವಂತಿದೆ. ಮೊದಲೇ ಟಿ.ಜಾನ್ ಬಡಾವಣೆಯ ರಸ್ತೆ ಎಲ್ಲವೂ ಕಿತ್ತುಹೋಗಿ, ಗುಂಡಿ ಬಿದ್ದು, ಸಂಚಾರ ದುಸ್ತರ ಎನಿಸಿದೆ. ಇಂತಹ ರಸ್ತೆಯ ಬದಿಗಳಲ್ಲಿ ಅಗೆದು ಪೈಪ್ ಅಳವಡಿಸಿ ಗುಂಡಿ ಮುಚ್ಚಿ ಸುಮಾರು 3 ತಿಂಗಳು ಕಳೆದರೂ ಮೊದಲಿನ ಸ್ಥಿತಿಗೆ ರಸ್ತೆಯ ಬದಿಯನ್ನು ತಂದಿಲ್ಲ. ಕೆಲವೊಂದು ಕಡೆ ಹಾಕಲಾಗಿದ್ದ ವೆಟ್‌ಮಿಕ್ಸ್‌ಗಳು ಕೊಚ್ಚಿಕೊಂಡು ಹೋಗಿವೆ. ಇನ್ನೂ ಹಲವೆಡೆ ಡಾಂಬರೂ ಇಲ್ಲ, ವೆಟ್‌ಮಿಕ್ಸ್ ಸಹ ಇಲ್ಲ. ಅಧ್ಯಕ್ಷೆ, ಉಪಾಧ್ಯಕ್ಷರ ವಾರ್ಡ್‌ಗಳೇ ಹೀಗಾದರೆ ಇನ್ನಾರಿಗೆ ದೂರುವುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಾಡುತ್ತಿದೆ 8 ವರ್ಷದ ಹಿಂದಿನ ಯುಜಿಡಿ ಕಾಮಗಾರಿ: ಕಳೆದ 8 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ನಡೆದಿದ್ದ ಒಳಚರಂಡಿ ಕಾಮಗಾರಿ ಪೂರ್ಣವಾಗಲೇ ಇಲ್ಲ. ಹೆಸರಿಗೆ ಮಾತ್ರ ಗುಂಡಿಗಳನ್ನು ನಿರ್ಮಿಸಲಾಯಿತು. ಸಂಪರ್ಕ ನೀಡದೇ ಅವುಗಳೆಲ್ಲವೂ ಕುಸಿಯುವ ಹಂತ ತಲುಪಿವೆ. ಅಮೃತ್–2 ಯೋಜನೆಯೂ ಆ ಸಾಲಿಗೆ ಸೇರುತ್ತದೆ ಎಂಬ ಅನುಮಾನ ಸಾರ್ವಜನಿಕರನ್ನು ಬಲವಾಗಿ ಕಾಡುತ್ತಿದೆ.
ಅಮೃತ್–2 ಯೋಜನೆಯನ್ನು ನಿಲ್ಲಿಸಲು ಒತ್ತಾಯ
ಕಳೆದ ಹಲವು ತಿಂಗಳುಗಳಿಂದ ಆಗುತ್ತಿರುವ ತೊಂದರೆಯಿಂದ ರೋಸಿರುವ ಹಲವು ಮಂದಿ ಅಮೃತ್–2 ಯೋಜನೆಯೇ ಬೇಡ ಕೂಡಲೇ ಅದನ್ನು ಸ್ಥಗಿತಗೊಳಿಸಿ ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಹಿರಿಯ ಮಾಜಿ ನಗರಸಭಾ ಸದಸ್ಯರು ಈ ಯೋಜನೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ನಗರಸಭೆಯ ಮಾಜಿ ಸದಸ್ಯ ಕೆ.ಎಂ.ಗಣೇಶ್ ಮಾತನಾಡಿ ‘ತೆಗೆದ ಗುಂಡಿಗಳನ್ನು ಸೂಕ್ತವಾಗಿ ಮುಚ್ಚುತ್ತಿಲ್ಲ. ಇದರಿಂದ ಗುಂಡಿಯೊಳಗೆ ನೀರು ಸೇರಿಕೊಂಡು ರಸ್ತೆಬದಿ ಕುಸಿಯುವ ಆತಂಕ ಮೂಡಿದೆ. ಹಾಗಾಗಿ ಕೂಡಲೇ ಕಾಮಗಾರಿ ನಿಲ್ಲಿಸಿ’ ಎಂದು ಆಗ್ರಹಿಸಿದರು. ಬೃಹತ್ ಪ್ರಮಾಣದ ನೀರಿನ ಪೈಪ್‌ಗಳನ್ನು ಹಾಕಲಾಗುತ್ತಿದೆ. ಇದರಲ್ಲಿ ಸರಬರಾಜು ಆಗುವಷ್ಟು ನೀರನ್ನು ಸಂಗ್ರಹ ಮಾಡುವ ವ್ಯವಸ್ಥೆ ಇದೆಯಾ ಎಂದೂ ಪ್ರಶ್ನಿಸಿದರು. ಹಿಂದೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹೀಗೆಯೇ ನೆಲ ಅಗೆದು ಪೈಪ್ ಅಳವಡಿಸಲಾಯಿತು. ಆದರೆ ಪೂರ್ಣವಾಗಲೇ ಇಲ್ಲ. ಕೋಟಿಗಟ್ಟಲೆ ಹಣ ಮಣ್ಣುಪಾಲಾಯಿತು. ಈ ಯೋಜನೆಯೂ ಅದೆ ಸಾಲಿಗೆ ಸೇರುವ ಸಂದೇಹ ಮೂಡಿದೆ ಎಂದರು. ಹಿಂದಿನ ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಎಂ.ಪಿ.ಕೃಷ್ಣರಾಜು ಮಡಿಕೇರಿ ದಸರಾ ದಶಮಂಟಪ ಮಾಜಿ ಅಧ್ಯಕ್ಷ ಮಂಜುನಾಥ್ ಕೋದಂಡರಾಮ ದೇವಾಲಯದ ಮಾಜಿ ಟ್ರಸ್ಟಿ ಅನಿಲ್ ಕೃಷ್ಣಾನಿ ದಸರಾ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ವನಚಾಮುಂಡಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಸಿ.ಸುನಿಲ್ ಭಾಗವಹಿಸಿದ್ದರು.
ಮಣ್ಣು ಕುಸಿಯುವ ಸಂಭವ ಇದೆ
ಅಮೃತ್–2 ಯೋಜನೆಯನ್ನು ಬಯಲುಸೀಮೆಯಲ್ಲಿ ಜಾರಿಗೊಳಿಸಿದಂತೆ ಕೊಡಗಿನಲ್ಲೂ ಅನುಷ್ಠಾನಕ್ಕೆ ತರಲಾಗುತ್ತಿದೆ. ಆದರೆ ಕೊಡಗು ಬೆಟ್ಟ ಗುಡ್ಡಗಳ ನಾಡು ಎಂಬುದನ್ನು ಮರೆಯಬಾರದು. ಇಲ್ಲಿ ಗುಡ್ಡದ ಮೇಲೆ ಎತ್ತರ ಪ್ರದೇಶದಲ್ಲಿ ಹಳ್ಳ ತೆಗೆದು ಸಮರ್ಪಕವಾಗಿ ಮುಚ್ಚದೇ ಇದ್ದರೆ ಅದರೊಳಗೆ ನೀರು ಸೇರಿ ಕ್ರಮೇಣ ಮಣ್ಣು ಕುಸಿಯುವ ಬರೆ ಜಾರುವ ಅಪಾಯ ಇದೆ. ಸೂಕ್ತ ಮುನ್ನಚ್ಚರಿಕೆ ವಹಿಸಬೇಕಿದೆ. ಇನ್ನಾದರೂ ನಗರಸಭೆ ಜವಾಬ್ದಾರಿ ತೆಗೆದುಕೊಂಡು ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡಿಸಬೇಕು. ಇಲ್ಲದಿದ್ದರೆ ಅವೈಜ್ಞಾನಿಕವಾಗಿ ಮಾಡುತ್ತಿರುವ ಇಂತಹ ಕಾಮಗಾರಿ ಬೇಡವೇ ಬೇಡ ಕೆ.ಎಂ.ಗಣೇಶ್ ನಗರಸಭೆ ಮಾಜಿ ಸದಸ್ಯ. ರಸ್ತೆಗಳ ಸ್ಥಿತಿ ತೀರಾ ಶೋಚನೀಯ ಈಗ ಮಲ್ಲಿಕಾರ್ಜುನ ನಗರ ಮುತ್ತಪ್ಪ ದೇವಾಲಯದ ರಸ್ತೆ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ಸೇರಿದಂತೆ ಹಲವೆಡೆ ಕಾಮಗಾರಿ ಮಾಡಲಾಗುತ್ತಿದೆ. ತೆಗೆದ ಗುಂಡಿಯನ್ನು ಸರಿಯಾಗಿ ಮುಚ್ಚುತ್ತಿಲ್ಲ. ಇದರಿಂದ ನಡೆದಾಡಲೂ ಕಷ್ಟಕರವಾಗಿದೆ ಮಂಜುನಾಥ್ ಮಡಿಕೇರಿ ದಸರಾ ದಶಮಂಟಪ ಮಾಜಿ ಅಧ್ಯಕ್ಷ. ಇನ್ನೂ ಹಸ್ತಾಂತರ ಆಗಿಲ್ಲ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರವಷ್ಟೇ ನಗರಸಭೆಗೆ ಹಸ್ತಾಂತರವಾಗುತ್ತದೆ. ಎಚ್.ಆರ್.ರಮೇಶ್ ನಗರಸಭೆ ಪೌರಾಯುಕ್ತ
‘ವೈಜ್ಞಾನಿಕವಾಗಿಯೆ ನಡೆಯುತ್ತಿದೆ’
ಅಮೃತ್–2 ಯೋಜನೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‌ಗಳ ತಂಡ ವೈಜ್ಞಾನಿಕವಾಗಿಯೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರತಿಪಾದಿಸಿದೆ. ಪರೀಕ್ಷಾರ್ಥ ನೀರು ಸರಬರಾಜು ಆಗುವವರೆಗೂ ತೆಗೆದ ಗುಂಡಿಯನ್ನು ಡಾಂಬರು ಇಲ್ಲವೇ ಕಾಂಕ್ರೀಟ್ ಹಾಕಿ ಮುಚ್ಚಲು ಸಾಧ್ಯವಿಲ್ಲ. ಪರೀಕ್ಷಾರ್ಥ ನೀರು ಸರಬರಾಜು ಮುಗಿದ ಕೂಡಲೇ ಗುಂಡಿ ತೆಗೆದಿರುವ ಕಡೆ ಮೊದಲಿನಂತೆ ಕಾಂಕ್ರೀಟ್ ಇಲ್ಲವೇ ಡಾಂಬರು ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಬಿಪಿನ್ ‘ಪ್ರಜಾವಾಣಿ’ಗೆ ತಿಳಿಸಿದರು. ಪೈಪ್‌ಲೈನ್ ಅಳವಡಿಕೆ ಕಾರ್ಯ 125 ಕಿ.ಮೀ ಪೈಕಿ 55 ಕಿ.ಮೀ ಮುಗಿದಿದೆ. ಈಗ 15 ಕಿ.ಮೀ ಪರೀಕ್ಷಾರ್ಥ ನೀರು ಸರಬರಾಜು ಮುಗಿದಿದೆ. ಸದ್ಯ ನಗರದಲ್ಲಿ ಒಟ್ಟು 47.50 ಲಕ್ಷ ಲೀಟರ್ ನೀರು ಸರಬರಾಜು ಮಾಡುವ 4 ಟ್ಯಾಂಕ್‌ಗಳಿವೆ. ಈ ಟ್ಯಾಂಕ್‌ಗಳಿಂದ ನಗರದಲ್ಲಿರುವ 7917 ಮನೆಗಳಿಗೆ ಸಂಪರ್ಕ ಕಲ್ಪಿಸಬಹುದು. ಇದು 2055ನೇ ಇಸವಿಗೆ ನಗರದಲ್ಲಿರಬಹುದಾದ ಜನಸಂಖ್ಯೆಯ ಆಧಾರದ ಮೇಲೆ ವೈಜ್ಞಾನಿಕವಾಗಿಯೇ ಕಾಮಗಾರಿ ನಡೆಯುತ್ತಿದೆ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.