ADVERTISEMENT

ಆನೆಗಳ ಕಾದಾಟ: ಸಾಕಾನೆ ‘ರಾಜೇಂದ್ರ’ ಸಾವು

ಕೊಡಗು ಜಿಲ್ಲೆಯ ಮತ್ತೊಗೋಡು ಸಾಕಾನೆ ಶಿಬಿರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 11:04 IST
Last Updated 15 ಅಕ್ಟೋಬರ್ 2020, 11:04 IST
ಆನೆ ಮೃತಪಟ್ಟಿರುವ ದೃಶ್ಯ
ಆನೆ ಮೃತಪಟ್ಟಿರುವ ದೃಶ್ಯ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ಸಾಕಾನೆಯೊಂದು ಮೃತಪಟ್ಟಿದೆ.

ರಾಜೇಂದ್ರ (56) ಹೆಸರಿನ ಗಂಡಾನೆ ಮೃತಪಟ್ಟಿದೆ.

ಮಂಗಳವಾರ ರಾತ್ರಿ ಈ ಆನೆಯನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಮರು ದಿನ ಬೆಳಿಗ್ಗೆ ಆನೆಯನ್ನು ಶಿಬಿರಕ್ಕೆ ಕರೆತರಲು ಮಾವುತ ಮತ್ತು ಕಾವಾಡಿಗರು ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ ಆನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು ಗುರುವಾರ ಮೃತಪಟ್ಟಿದೆ ಎಂದು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ತಿಳಿಸಿದರು.

ADVERTISEMENT

1990ರಲ್ಲಿ ಸೋಮವಾರಪೇಟೆ ವಲಯದ ಯಡವನಾಡು ಅರಣ್ಯದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. 30 ವರ್ಷಗಳ ಕಾಲ ಶಿಬಿರದಲ್ಲಿದ್ದ ಆನೆ ಅಭಿಮನ್ಯುವನ್ನು ಬಿಟ್ಟರೆ, ಇತರೆ ಆನೆಗಳಿಗೆ ನಾಯಕನಂತಿತ್ತು ಎಂದು ಶಿಬಿರದ ಮಾವುತರು ಹೇಳಿದರು.

ಪಶುವೈದ್ಯ ಮುಜಿಬ್ ರೆಹಮಾನ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಡಿ.ಮಹೇಶ್ ಕುಮಾರ್, ಹುಣಸೂರು ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ, ವನ್ಯಜೀವಿ ಮಂಡಳಿ ಸದಸ್ಯ ಸುಬ್ರು ಪರಿಶೀಲಿಸಿದರು.

‘ರಕ್ಷಣೆ ಇಲ್ಲ’: ಹುಣಸೂರು ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಬದಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳು ಮತ್ತು ಮಾವುತರಿಗೆ ರಕ್ಷಣೆಯಿಲ್ಲ ಎಂದು ವನ್ಯಜೀವಿ ಪ್ರಿಯರು ದೂರಿದ್ದಾರೆ.

ಎರಡು ವರ್ಷಗಳ ಹಿಂದೆ ಕೇರಳದ ಖಾಸಗಿ ಬಸ್ ಡಿಕ್ಕಿ ಹೊಡೆದು ‘ರಂಗ’ ಎಂಬ ಸಾಕಾನೆ ಸ್ಥಳದಲ್ಲಿಯೇ ಮೃತಪಟ್ಟಿತ್ತು. ಅರು ತಿಂಗಳ ಹಿಂದೆ ಆನೆಯನ್ನು ಕಾಡಿಗೆ ಬಿಡಲು ಮಾವುತ ಜೆ.ಕೆ.ರಮೇಶ್ ರಸ್ತೆಬದಿಯಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಅವರು ಮೃತರಾಗಿದ್ದರು. ಇದೀಗ ರಾಜೇಂದ್ರ ಎಂಬ ಆನೆ, ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ನೋವಿನ ಸಂಗತಿ ಎಂದು ಮುತ್ತಪ್ಪ ಬೇಸರ ವ್ಯಕ್ತಪಡಿಸಿದರು. ಎರಡು ವರ್ಷಗಳ ಹಿಂದೆ ಈ ಶಿಬಿರದಲ್ಲಿ 42 ಆನೆಗಳಿದ್ದವು. ಈಗ ಕೇವಲ 17 ಆನೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.