ಮಡಿಕೇರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಹಕ್ಕುಗಳ ಅರ್ಜಿಗಳಿಗೆ ಅನುಮೋದನೆ ನೀಡಲಾಯಿತು.
ಸಭೆಯ ಆರಂಭದಲ್ಲೇ ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ಉಪ ವಿಭಾಗ ಮಟ್ಟದಲ್ಲಿ ಅನುಮೋದನೆ ದೊರೆತಿದ್ದು, ಜಿಲ್ಲಾ ಮಟ್ಟದಲ್ಲಿ ಅನುಮೋದಿಸಬೇಕಿದೆ ಎಂದು ಕೋರಿದರು.
ಪೊನ್ನಂಪೇಟೆ ತಾಲ್ಲೂಕಿನ ಪರಿಶಿಷ್ಟ ಪಂಗಡದ ಕಾಡುಕುರುಬ ಸಮಾಜದ ತಿತಿಮತಿಯ ದೊಡ್ಡರೇಷ್ಮೆ ಹಡ್ಲುವಿನ ಸ್ವಾಮಿ ಬಿ.ಕೆ ಅಲಿಯಾಸ್ ಕಾಳ, ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಗದ್ದೆಯ ಜೇನುಕುರುಬ ಜೆ.ಬೋಜಿ ಜೆ.ಆರ್.ಸಣ್ಣಪ್ಪ ಅಲಿಯಾಸ್ ಪೌತಿ ರಂಗ, ಕುಶಾಲನಗರ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮು ವೈ.ಡಿ. ಅಲಿಯಾಸ್ ಪೌತಿ ದೊರೆಸ್ವಾಮಿ, ನಂಜರಾಯಪಟ್ಟಣದ ಬಿ.ಎಂ.ರಾಧ, ನಂಜರಾಯ ಪಟ್ಟಣದ ಚೆಲ್ಲಪ್ಪ ಬಿ.ಕೆ.ಪೌತಿ ಕಾಳ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಹಾಡಿಯ ಚಂದ್ರಕಲಾ, ಚಿಕ್ಕಳುವಾರ ಹಾಡಿಯ ಬಸಪ್ಪ ಅಲಿಯಾಸ್ ಕಾಳಸಪ್ಪ, ಚಿಕ್ಕಳುವಾರದ ಮರಿಯಪ್ಪ ಅಲಿಯಾಸ್ ಹುಚ್ಚಪ್ಪ, ಇವರ ವೈಯಕ್ತಿಕ ಅರ್ಜಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ದೊರೆಯಿತು.
ಸಮುದಾಯ ಹಕ್ಕುಗಳಿಗೆ ಸಂಬಂಧಿಸಿದಂತೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರೇಷ್ಮೆ ಜೆ.ಬಿ.ರಾಮು ಹಾಗೂ 96 ಜನ ಪರಿಶಿಷ್ಟ ಪಂಗಡದವರಿಗೆ, ಚೇಣಿಹಡ್ಲು ಹಾಡಿಯ ಸುಬ್ಬ ಪಿ.ಎಸ್. ಅಲಿಯಾಸ್ ಪೌತಿ ನಂಜ ಹಾಗೂ 66 ಜನ ಪರಿಶಿಷ್ಟ ಪಂಗಡದವರಿಗೆ, ಬೊಂಬುಕಾಡು ರಾಮು ಪಿ.ಕೆ. ಅಲಿಯಾಸ್ ಕರಿಯ ಹಾಗೂ 41 ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆಹಳ್ಳ, ಆನೆ ಕ್ಯಾಂಪು, ಜೆ.ಬಿ.ಕುಮಾರ ಹಾಗೂ 22 ಜನ ಪರಿಶಿಷ್ಟ ಪಂಗಡದವರಿಗೆ, ಆಯಿರಸುಳಿ ರಾಮು ಪಿ.ಎಸ್. ಹಾಗೂ 46 ಜನ ಪರಿಶಿಷ್ಟ ಪಂಗಡದವರಿಗೆ, ಜಂಗಲ್‍ಹಾಡಿ ಪಿ.ಸಿ.ಮಾದ ಮತ್ತು 32 ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆ ಹಳ್ಳ ಫಾರ್ಮ್ ಪಿ.ಎಂ.ಸುಬ್ಬಣ್ಣ ಹಾಗೂ 63 ಜನ ಪರಿಶಿಷ್ಟ ಪಂಗಡದವರಿಗೆ, ಕಾರೆಕಂಡಿ ಹಾಡಿಯಲ್ಲಿ ಪಾಪಣ್ಣ ಪಿ.ಎಸ್. ಹಾಗೂ 51 ಜನ ಪರಿಶಿಷ್ಟ ಪಂಗಡದವರಿಗೆ, ಸಮುದಾಯ ಹಕ್ಕು ಕಾಯ್ದೆಯಡಿ ಕಿರು ಅರಣ್ಯ ಸಂಗ್ರಹಕ್ಕಾಗಿ ಅನುಮೋದನೆ ದೊರೆಯಿತು.
2012ರಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ 45 ಸಮುದಾಯ ಸಂಪನ್ಮೂಲ ಅರ್ಜಿಗಳನ್ನು ಒಂದಕ್ಕಿಂತ ಹೆಚ್ಚು ಸಾಕ್ಷಿ ಕೋರಿ ಅನುಮೋದಿಸಲಾಗಿತ್ತು. ಈ ಪೈಕಿ ಮರು ಸರ್ವೆ ನಡೆಸಿ ಇಲ್ಲಿಯವರೆಗೆ ಮಡಿಕೇರಿ ತಾಲ್ಲೂಕಿನ 8 ಮತ್ತು ವಿರಾಜಪೇಟೆ ತಾಲ್ಲೂಕಿನ 8 ಒಟ್ಟು 16 ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ‘ಕಿರು ಅರಣ್ಯ ಸಂಗ್ರಹಕ್ಕಾಗಿ ಹಕ್ಕು ಪತ್ರ’ ವಿತರಿಸಲಾಗಿದೆ. 29 ಅರ್ಜಿಗಳು ಹಕ್ಕುಪತ್ರ ವಿತರಿಸಲು ಬಾಕಿ ಇದ್ದು, 8 ಅರ್ಜಿಗಳು ಮರು ಸರ್ವೆ ನಡೆಸಿ ಹಕ್ಕುಪತ್ರ ಸಹಿಗೆ ಸಲ್ಲಿಸಬೇಕಿದೆ. ಉಳಿದಂತೆ 21 ಅರ್ಜಿಗಳು ಬಾಕಿ ಇವೆ.
ಮರು ಪರಿಶೀಲನೆಗಾಗಿ ಬಾಕಿ ಇರುವ ಅರ್ಜಿಗಳು ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ವ್ಯಾಪ್ತಿಯ ತುಂಡುಮುಂಡಗೆ ಕೊಲ್ಲಿ, ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ, ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಕಾಡು, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಈ ಹಾಡಿಗಳಲ್ಲಿ ಮರು ಪರಿಶೀಲನೆಗೆ ಬಾಕಿ ಇದ್ದು, ಕಾನೂನು ರೀತಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ನಾಗರಹೊಳೆ ಹುಲಿ ಯೋಜನಾ ವಿಭಾಗದ ನಿರ್ದೇಶಕಿ ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅನನ್ಯ ಕುಮಾರ್, ಲಕ್ಷ್ಮೀಕಾಂತ್, ಭೂದಾಖಲೆಗಳ ಉಪ ನಿರ್ದೇಶಕ ನಾರಾಯಣ ಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
4277 ಅರ್ಜಿಗಳು ಸಲ್ಲಿಕೆ
2412 ಅನುಮೋದನೆ ಅರಣ್ಯ ಹಕ್ಕು ಕಾಯ್ದೆಯಡಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಪರಿಶಿಷ್ಟ ಪಂಗಡದವರು 2847 ಅರ್ಜಿಗಳನ್ನು ಸಲ್ಲಿಸಿದ್ದು ಇತರೆ 1373 ಜನರು ಅರ್ಜಿ ಸಲ್ಲಿಸಿದ್ದಾರೆ. ಹಾಗೂ 57 ಮಂದಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು ಒಟ್ಟು 4277 ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಪರಿಶಿಷ್ಟ ಪಂಗಡದ 1840 ಅರ್ಜಿಗಳಿಗೆ ಅನುಮೋದನೆಯಾಗಿದೆ. ಇತರೆ ಸಮಾಜದಲ್ಲಿ 527 ಅರ್ಜಿಗಳು ಅನುಮೋದನೆಯಾಗಿದೆ. ಸಿಎಫ್‍ಆರ್ ನಡಿ 45 ಅರ್ಜಿಗಳು ಅನುಮೋದನೆಯಾಗಿದ್ದು ಒಟ್ಟು 2412 ಅರ್ಜಿಗಳು ಅನುಮೋದನೆಯಾಗಿದೆ. ಉಳಿದಂತೆ 1865 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.