
ಸೋಮವಾರಪೇಟೆ: ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆ ಗ್ರಾಮದಲ್ಲಿರುವ ಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ. 15 ಮತ್ತು 16ರಂದು ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಅಷ್ಟಯಾಮ ಪೂಜೆಯೊಂದಿಗೆ, ವಿಶೇಷವಾಗಿ ದೇವರಿಗೆ 1108 ಎಳನೀರು ಅಭಿಷೇಕ ನೆರವೇರಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.
15ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಆರಂಭವಾಗಲಿದ್ದು, ನಂತರ ಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಲಿದೆ. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆಯಲಿವೆ. 1108 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕ ಹಾಗೂ 16ರಂದು ಬೆಳಿಗ್ಗೆ ಭಸ್ಮಾಭಿಷೇಕ ನಡೆಯಲಿದೆ. ಪ್ರತಿಯಾಮದ ಪೂಜೆಯಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ನೆರವೇರಲಿದೆ ಎಂದು ತಿಳಿಸಿದ್ದಾರೆ.
16ರಂದು ಬೆಳಿಗ್ಗೆ ರುದ್ರಹೋಮ, 9.30ಕ್ಕೆ ಕಲಶಾಭಿಷೇಕ ನಂತರ 10 ಗಂಟೆಗೆ ಭಕ್ತರಿಗೆ ತೀರ್ಥಸ್ನಾನ ನಡೆಯಲಿದೆ. ನಂತರ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರಿಗೆ ಮಹಾನೈವೇದ್ಯ ಮತ್ತು ಮಹಾಪೂಜೆಯ ನಂತರ ಅನ್ನಪ್ರಸಾದ ವಿತರಿಸಲಾಗುವುದು. ಎರಡು ದಿನಗಳ ಮಹಾಶಿವರಾತ್ರಿ ಉತ್ಸವದಲ್ಲಿ ಕುಶಾಲನಗರ ಹಾಗೂ ದೇವಾಲಯದ ಭಕ್ತರಿಂದ ಭಜನೆಗಳು ನಡೆಯಲಿದೆ. ಅಷ್ಟಯಾಮದ ಪೂಜೆಗಳು ಕ್ಷೇತ್ರದ ಪ್ರಧಾನಗುರು ರಾಜೇಶ್ ನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.