
ವಿರಾಜಪೇಟೆ: ‘ಎಲ್ಲ ಸಮುದಾಯಗಳ ಬೇಡಿಕೆ ಪರಿಗಣನೆಗೆ ತೆಗೆದುಕೊಂಡು ಜಾತಿ, ಮತ ಭೇದಭಾವವಿಲ್ಲದೆ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಕೊಡಗು ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರ್ಕಾರದಿಂದ 6 ಎಕರೆ ಜಾಗ ಮಂಜೂರು ಮಾಡಿಸಿಕೊಟ್ಟ ಹಿನ್ನೆಲೆಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿ ಹಾಗೂ ಗೌಡ ಸಮಾಜಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಗೌಡ ಸಮಾಜದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಅಭಿನಂದನೆ ಮತ್ತು ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಡಗು ಗೌಡ ಸಮಾಜಕ್ಕೆ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಟ್ಟಿರುವುದರಿಂದ ಇಲ್ಲಿಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳಿಗೆ ಪೂರಕವಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ಸದಾ ಸಹಕಾರ ನೀಡಲಾಗುವುದು. ಇಲ್ಲಿನ ಸಂಸ್ಕೃತಿ ಉಳಿಸಬೇಕು. ಅಭಿವೃದ್ಧಿ ಒಂದೇ ನಮ್ಮ ಮೂಲ ಮಂತ್ರ. ಜಿಲ್ಲೆಯ ಕೃಷಿಕರನ್ನು ಅನೇಕ ವರ್ಷಗಳಿಂದ ಕಾಡಿದ್ದ ಜಮ್ಮಾಬಾಣೆ ಸಮಸ್ಯೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಇಲ್ಲಿ ಜಾತಿ ಮತ ಮುಖ್ಯವಲ್ಲ. ಅಭಿವೃದ್ಧಿ ಮುಖ್ಯ. ಶಾಸಕರು ಸದಾ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತ ಬರುತ್ತಿದ್ದಾರೆ ಎಂದು ತಿಳಿಸಿದರು.
ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಸಾಮರಸ್ಯದ ಜೀವನದ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ನಾಣಯ್ಯ ಮಾತನಾಡಿ, ನಮ್ಮ ಜನಾಂಗದ ಏಳಿಗೆ ಹಾಗೂ ಸಮಾಜ ಮತ್ತು ಐನ್ ಮನೆಗಳ ಅಭಿವೃದ್ಧಿಗೆ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ವಿರಾಜಪೇಟೆ ಗೌಡ ಸಮಾಜದ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.
ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಮುಕ್ಕಾಟಿ ಮನೋಜ್, ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ನಾಣಯ್ಯ ಅವರನ್ನು ಒಕ್ಕೂಟ್ಗಶದ ಸನ್ಮಾನಿಸಲಾಯಿತು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಡಾ.ರಾಜೇಶ್ ತೇನನ, ಮುಕ್ಕಾಟಿ ಮನೋಜ್ ಮಾತನಾಡಿದರು. ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಖಜಾಂಚಿ ಅಂಬೆಕಲ್ ನವೀನ್, ಕಾರ್ಯದರ್ಶಿ ಪೇರಿಯನ ಉದಯ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕೊಡಗು ಗೌಡ ಯುವ ವೇದಿಕೆಯಿಂದ ಏ.27ರಿಂದ ಮೇ 17ರವರೆಗೆ ನಡೆಯುವ ಕೀಡಾಕೂಟದ ಪೋಸ್ಟರ್ ಬಿಡುಗಡೆಗೊಳಿಸಿದರು.
ಅಭಿವೃದ್ಧಿ ಒಂದೇ ನಮ್ಮ ಮೂಲ ಮಂತ್ರ ಜನಾಂಗದ ಏಳಿಗೆ, ಐನ್ ಮನೆಗಳ ಅಭಿವೃದ್ಧಿಗೆ ಸಹಕರಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.