ADVERTISEMENT

ಕೊಡಗು ಜಿಲ್ಲೆಗೆ ಎಂಜಿನಿಯರ್‌ಗಳ ನಿಯೋಜಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:41 IST
Last Updated 17 ಸೆಪ್ಟೆಂಬರ್ 2025, 4:41 IST
<div class="paragraphs"><p>ಎನ್.ಎಸ್. ಭೋಸರಾಜು</p></div>

ಎನ್.ಎಸ್. ಭೋಸರಾಜು

   

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೊಬೈಲ್ ಕರೆ ಮಾಡಿ ಜಿಲ್ಲೆಗೆ ಸಹಾಯಕ ಹಾಗೂ ಕಿರಿಯ ಅಗತ್ಯ ಎಂಜಿನಿಯರ್‌ಗಳನ್ನು ನಿಯೋಜಿಸುವಂತೆ ಹೇಳಿದರು.

ಈ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಾಕೃತಿಕ ವಿಕೋಪ ಸಂಬಂಧದ ಸಭೆಯಲ್ಲಿ ನಡೆಯಿತು.

ADVERTISEMENT

ಪಂಚಾಯತ್ ರಾಜ್ ಕಾರ್ಯಪಾಲಕ ಎಂಜಿನಿಯರ್ ಜಿ.ಕೆ.ನಾಯಕ್ ಅವರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ, ತಡೆಗೋಡೆ, ಮೋರಿ, ಕೆರೆ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದ್ದು, ₹ 54 ಕೋಟಿ ಬಿಡುಗಡೆಗೆ ಎನ್‍ಡಿಆರ್‌ಎಫ್ ನಡಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗ ಮತ್ತು ಉಪ ವಿಭಾಗದಲ್ಲಿ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳ ಕೊರತೆ ಇದ್ದು, ಕೆಲಸ ನಿರ್ವಹಿಸುವುದೇ ಕಷ್ಟವಾಗಿದೆ’ ಎಂದು ಸಭೆಯ ಗಮನ ಸೆಳೆದರು.

ಇದನ್ನು ಕೇಳಿದ ಸಚಿವ ಎನ್.ಎಸ್.ಭೋಸರಾಜು ಸಚಿವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಕೂಡಲೇ ಎಂಜಿನಿಯರ್‌ಗಳನ್ನು ನಿಯೋಜಿಸುವಂತೆ ತಿಳಿಸಿದರು.

ಇದಕ್ಕೂ ಮುನ್ನ ಅವರು, ಕಳೆದ 4 ತಿಂಗಳು ಸುರಿದ ಮಳೆಯಿಂದ ಉಂಟಾದ ಹಾನಿ ಬಗ್ಗೆ ಲೋಕೋಪಯೋಗಿ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಜನವರಿಯಿಂದ ಸೆ. 14ರವರಗೆ ವಾಡಿಕೆಯಂತೆ 233 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 279 ಸೆಂ.ಮೀ ಮಳೆಯಾಗಿದೆ. ಮರ ಬಿದ್ದು ಇಬ್ಬರು, ಮನೆ ಗೂಡೆ ಕುಸಿದು ಒಬ್ಬರು ಮೃತ ಪಟ್ಟಿದ್ದಾರೆ. ಹಾಗೆಯೇ 23 ಜಾನುವಾರುಗಳು ಮೃತ ಪಟ್ಟಿದ್ದು, ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು. 

ಪ್ರಸ್ತುತ ಪ್ರಾಕೃತಿಕ ವಿಕೋಪ ನಿಧಿಯಡಿ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ ₹ 35.05 ಕೋಟಿ ಹಣವಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಹಾನಿ ಸಂಬಂಧ ₹ 4.52 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಹಾಗೆಯೇ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ‘ಮುಂಗಾರು ಸಂದರ್ಭದಲ್ಲಿ ಮುಟ್ಲು ಗ್ರಾಮ ವ್ಯಾಪ್ತಿಯಲ್ಲಿ ಭತ್ತ ಬೆಳೆಗೆ ಹಾನಿಯಾಗಿದೆ’ ಎಂದು ತಿಳಿಸಿದರು.

ಈ ವೇಳೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು, ಕಳೆದ ಬಾರಿಯ ಮಳೆಹಾನಿಯ ಕಾಮಗಾರಿಯ ಮಾಹಿತಿ ನೀಡುವಂತೆ ಸೂಚಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.