ನಾಪೋಕ್ಲು: ಮಲ್ಮ ಹಾಕಿ ಕ್ಲಬ್ ಹಾಗೂ ಕುಂಜಿಲ–ಕಕ್ಕಬ್ಬೆ ಪಂಚಾಯಿತಿ ವತಿಯಿಂದ ಕಕ್ಕಬ್ಬೆ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕೀಡಾಕೂಟದ ಹಾಕಿ ಟೂರ್ನಿಯಲ್ಲಿ ಮರಂದೋಡ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕುಂಜಿಲ ತಂಡ ಗಳಿಸಿತು.
ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ನಾಲಡಿ ತಂಡ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಕುಂಜಿಲ ತಂಡ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಕುಂಜಿಲ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಯವಕಪಾಡಿ ತಂಡಗಳು ಪಡೆದುಕೊಂಡವು.
ಕ್ರೀಡಾಕೂಟದ ಸಮಾರಂಭದ ಅಧ್ಯಕ್ಷತೆಯನ್ನು ಮಲ್ಮ ಸಂಘದ ಅಧ್ಯಕ್ಷ ಮಾದಂಡ ಸಂದೇಶ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಈಚೆಗೆ ವಿವಿಧ ಕ್ರೀಡಾಕೂಟಗಳು ಜನಪ್ರಿಯಗೊಳ್ಳುತ್ತಿವೆ. ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಸಾಮರಸ್ಯ ಸಾಧ್ಯ. ಕ್ರೀಡಾಪಟುಗಳು ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಅತಿಥಿಗಳಾಗಿ ಅಂಜಪರವಂಡ ಕುಶಾಲಪ್ಪ, ಬಡಕದ ಸುರೇಶ್, ಚಂಡಿರ ರಾಲಿ ಗಣಪತಿ, ಬೋಳಿಯಾಡಿರ ಸಂತು ಸುಬ್ರಮಣಿ, ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯಿತಿ ಪಿಡಿಒ ಅಶೋಕ್, ಚೊಯಮಂಡ ಹರೀಶ್ ಮೊನ್ನಪ್ಪ, ಸೌಕ ವೈಕೂಲ್, ಮಾಮು ಕುಂಜಿಲ, ಪರದಂಡ ಸದಾನಾಣಯ್ಯ, ಕುಡಿಯರ ದಿಲೀಪ್, ಮಾದಂಡ ಜಗ ಸೇರಿದಂತೆ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.