ಸೋಮವಾರಪೇಟೆ ತಾಲ್ಲೂಕಿನ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಶುಕ್ರವಾರ ಧರ್ಮಸ್ಥಳದವರೆಗೆ ಬೃಹತ್ ಜಾಥಾ ನಡೆಯಿತು
ಸೋಮವಾರಪೇಟೆ: ತಾಲ್ಲೂಕಿನ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಶುಕ್ರವಾರ ಪಟ್ಟಣದಿಂದ ಶ್ರೀಕ್ಷೇತ್ರ ಧರ್ಮಸ್ಥಳದವರೆಗೆ ಬೃಹತ್ ವಾಹನ ಜಾಥಾ ನಡೆಸಿತು.
ಕಕ್ಕೆಹೊಳೆ ಬಳಿಯ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಶನಿವಾರಸಂತೆ, ಕೊಡ್ಲಿಪೇಟೆ, ಶುಕ್ರವಾರಸಂತೆ, ದೋಣಿಗಲ್ಲು, ಗುಂಡ್ಯ ರಾಷ್ಟ್ರಿಯ ಹೆದ್ದಾರಿ ಮಾರ್ಗವಾಗಿ ಧರ್ಮಸ್ಥಳ ತಲುಪಿತು. ಸುಮಾರು 150 ವಾಹನಗಳಲ್ಲಿ 500ಕ್ಕೂ ಹೆಚ್ಚು ಭಕ್ತರು ವಾಹನ ಜಾಥಾದಲ್ಲಿ ಪಾಲ್ಗೊಂಡು, ಬಳಿಕ ಧರ್ಮಸ್ಥಳದ ದೇವಾಲಯ ಆವರಣಕ್ಕೆ ಮೆರವಣಿಗೆ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದರು.
ತಾಲ್ಲೂಕು ಸಂಚಾಲಕ ಸುಭಾಷ್ ಮಾತನಾಡಿ, ‘ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸಿ ಸೋಮವಾರಪೇಟೆ ಭಾಗದ ಭಕ್ತರಿಂದ ಜಾಗೃತಿ ಜಾಥಾವನ್ನು ನಡೆಸಿದ್ದೇವೆ. ಎಸ್.ಐ.ಟಿ ತನಿಖೆ ಪ್ರಾಮಾಣಿಕವಾಗಿ ನಡೆಯಬೇಕು ಹಾಗೂ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ನಿವಾರಿಸ ಬೇಕೆಂಬ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ’ ಎಂದರು.
ಸಮಿತಿ ಹಿರಿಯ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ‘ಧರ್ಮಸ್ಥಳದ ಮೇಲಿರುವ ಅಪನಂಬಿಕೆಯನ್ನು ಹೋಗಲಾಡಿಸಬೇಕು, ಸನಾತನ ಸಂಪ್ರದಾಯವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಈ ಜಾಥಾವನ್ನು ಹಮ್ಮಿಕೊಂಡಿದ್ದೇವೆ. ಇದು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಯಿಂದ ತನಿಖೆ ಆಗಬೇಕು, ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು. ಅವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಸಹ ಸಂಚಾಲಕ ಶಶಿಕಾಂತ್ ಬಜೆಗುಂಡಿ, ಸಮಿತಿಯ ಸದಸ್ಯರಾದ ಸುನಿಲ್ ಮಾದಾಪುರ, ಎಂ.ಬಿ.ಉಮೇಶ್ ಬೋಜೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.