ADVERTISEMENT

ಕೊಡಗು ಜಿಲ್ಲೆಯ ರೈತರಲ್ಲಿದೆ ಹಲವು ನಿರೀಕ್ಷೆ; ಫಲಿಸುವುದೆಷ್ಟೋ?

ಸಿ ಮತ್ತು ಡಿ ಭೂಮಿ ಸಮಸ್ಯೆ ಪರಿಹಾರದ ಭರವಸೆ

ಕೆ.ಎಸ್.ಗಿರೀಶ್
Published 1 ಜನವರಿ 2026, 6:38 IST
Last Updated 1 ಜನವರಿ 2026, 6:38 IST
ಕಳೆದ ವರ್ಷ (2025) ಆಗಸ್ಟ್‌ ತಿಂಗಳಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಗಾರ್ವಾಲೆ ಗ್ರಾಮದಲ್ಲಿ ಶುಂಠಿ ಬೆಳೆಗೆ ಕೊಳೆರೋಗ ಬಾಧಿಸಿದ್ದು
ಕಳೆದ ವರ್ಷ (2025) ಆಗಸ್ಟ್‌ ತಿಂಗಳಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಗಾರ್ವಾಲೆ ಗ್ರಾಮದಲ್ಲಿ ಶುಂಠಿ ಬೆಳೆಗೆ ಕೊಳೆರೋಗ ಬಾಧಿಸಿದ್ದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ರೈತರ ಸಮಸ್ಯೆಗಳಿಗೂ ರಾಜ್ಯದ ಬೇರೆ ಜಿಲ್ಲೆಯಲ್ಲಿರುವ ರೈತರ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇತರೆ ಎಲ್ಲ ಜಿಲ್ಲೆಯಲ್ಲಿರುವ ರೈತರನ್ನು ಕಾಡುವ ಸಾಮಾನ್ಯ ಸಮಸ್ಯೆಗಳ ಜೊತೆಗೆ ಕೊಡಗು ಜಿಲ್ಲೆಯ ರೈತರನ್ನು ಮಾತ್ರವೇ ವಿಶೇಷವಾಗಿ ಕಾಡುತ್ತಿರುವ ಸಮಸ್ಯೆಗಳೂ ಇವೆ. ಹೀಗಾಗಿ, ರಾಜ್ಯದ ಇತರೆ ಜಿಲ್ಲೆಗಳ ರೈತರ ನಿರೀಕ್ಷೆಗಿಂತ ಕೊಡಗಿನ ರೈತರ ನಿರೀಕ್ಷೆಗಳು ಹೆಚ್ಚಿವೆ.

ಕೊಡಗಿನಲ್ಲಿ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಹಾಗೂ ರೈತರ ಅಸ್ತಿತ್ವದ ಪ್ರಶ್ನೆ ಎನಿಸಿರುವ ‘ಸಿ’ ಮತ್ತು ‘ಡಿ’ ಭೂಮಿ ಸಮಸ್ಯೆಗೆ ಈ ವರ್ಷವಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಈ ಕುರಿತು ಸರ್ಕಾರ ಸಮಿತಿಯೊಂದನ್ನು ರಚಿಸಿರುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ಆಶಾಭಾವನೆಯನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚು ೀ ವರ್ಷ ಗರಿಗೆದರಿಸಿದೆ. ಈ ವರ್ಷವೇ ಈ ಸಮಸ್ಯೆ ಇತ್ಯರ್ಥಗೊಂಡು ರೈತರ ಆತಂಕ ನಿವಾರಣೆಯಾಗಲಿ ಎಂಬುದು ಎಲ್ಲ ರೈತರ ಅಭಿಪ್ರಾಯವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೈತ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್, ‘ಸೆಕ್ಷನ್ –4 ಹಾಗೂ ಸಿ ಮತ್ತು ಡಿ ಭೂಮಿ ಸಮಸ್ಯೆಯು ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಇತ್ಯರ್ಥ ಕಾಣಬೇಕು. ಸರ್ಕಾರ ಸಮಿತಿ ರಚಿಸಿರುವುದರಿಂದ ನಮಗೆ ನಿರೀಕ್ಷೆಗಳು ಈ ವರ್ಷ ಹೆಚ್ಚಾಗಿದೆ. ಇದು ಆದಷ್ಟು ಬೇಗ ತಾರ್ಕಿಕ ಅಂತ್ಯ ಕಂಡು ನಮ್ಮ ಆತಂಕ ದೂರವಾಗಬೇಕು’ ಎಂದು ಅವರು ಹೇಳಿದರು.

ADVERTISEMENT

‘ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು’ ಎಂದು ಮನವಿ ಮಾಡಿದರು.

ಬೆಳೆನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯಾಗಲಿ: ಕೊಡಗು ಜಿಲ್ಲೆಯಲ್ಲಿ ಆಗುವ ಬೆಳೆನಷ್ಟಕ್ಕೂ ಬೇರೆ ಜಿಲ್ಲೆಯಲ್ಲಿ ಆಗುವ ಬೆಳೆನಷ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬೇರೆ ಜಿಲ್ಲೆಗಳಲ್ಲಿ ಬೆಳೆಗಳಿಗೆ ಬರುವ ಕಾಯಿಲೆಗಳಿಂದ ಅಥವಾ ಬರದಿಂದ ನಷ್ಟವಾಗುತ್ತದೆ. ಆದರೆ, ಕೊಡಗಿನಲ್ಲಿ ಇವುಗಳ ಜೊತೆಗೆ ಅಧಿಕ ಮಳೆಯಿಂದ ನಷ್ಟವಾಗುವುದು ಅಧಿಕ. ಜೊತೆಗೆ, ವನ್ಯಜೀವಿಗಳ ಹಾವಳಿಯಿಂದಲೂ ಇತರೆ ಜಿಲ್ಲೆಗಳಿಗಿಂತ ಹೆಚ್ಚು ನಷ್ಟವಾಗುತ್ತದೆ. ಈ ಸ್ವರೂಪದ ಬೆಳೆನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆದು ಸಕಾಲದಲ್ಲಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನುಸೋಮಯ್ಯ, ‘ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಈ ವರ್ಷ ಹೆಚ್ಚು ಮಳೆಯಿಂದ ರೈತರ ಬೆಳೆ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಸಕಾಲದಲ್ಲಿ ಕೀಟನಾಶಕ ಸಿಂಪಡಿಸಲು, ಗೊಬ್ಬರ ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ, ಉತ್ತಮ ಬೆಳೆ ಸಿಕ್ಕಿಲ್ಲ. ಬಹಳಷ್ಟು ಭತ್ತದ ಬೆಳೆ ಜೊಳ್ಳಾಗಿದೆ. ಈ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು.

ಇದರೊಂದಿಗೆ ವನ್ಯಜೀವಿಗಳಿಂದ ಉಂಟಾಗುವ ಬೆಳೆನಷ್ಟವನ್ನೂ ಸೇರಿಸಿ, ವೈಜ್ಞಾನಿಕ ಸಮೀಕ್ಷೆ ನಡೆಸುವ, ಪರಿಹಾರ ನೀಡುವ ಒಂದು ವ್ಯವಸ್ಥೆ ಈ ವರ್ಷದಲ್ಲಿ ಜಾರಿಗೆ ಬರಲಿ ಎಂಬುದು ನಮ್ಮ ನಿರೀಕ್ಷೆ ಎಂದರು.

ನಾಪೋಕ್ಲು ಹೊರವಲಯದಲ್ಲಿ ಕಾರ್ಮಿಕರು ಈಚೆಗೆ ಭತ್ತದ ಕಟಾವು ಮಾಡಿದರು

ಬೆಳೆನಷ್ಟ ಕುರಿತು ವೈಜ್ಞಾನಿಕವಾದ ಸಮೀಕ್ಷೆ ನಡೆಸಬೇಕು. ರೈತರಿಗೆ ಆಗಿರುವ ನಷ್ಟಕ್ಕೆ ನಿಖರ ಪರಿಹಾರ ನೀಡುವ ವ್ಯವಸ್ಥೆ ಈ ವರ್ಷದಲ್ಲಾದರೂ ಜಾರಿಗೆ ಬರಲಿ

–ಮನು ಸೋಮಯ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ.

ರೈತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ‘ಸಿ’ ಮತ್ತು ‘ಡಿ’ ಸಮಸ್ಯೆ ನಿವಾರಣೆಯಾಗಬೇಕಿದೆ. ರೈತರಿಗೆ ಹಕ್ಕುಪತ್ರ ನೀಡಬೇಕು. ಈ ಕುರಿತ ನಿರೀಕ್ಷೆ ಭರವಸೆ ಹೊಂದಿದ್ದೇವೆ

–ಕೆ.ಎಂ.ದಿನೇಶ್ ಸೋಮವಾರಪೇಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.