ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಪವಿತ್ರ ‘ಈದ್–ಉಲ್–ಅದಾ’ (ಬಕ್ರೀದ್) ಹಬ್ಬವನ್ನು ಶನಿವಾರ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಜೀವಿಸಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವ ಈ ಹಬ್ಬದಲ್ಲಿ ಜಿಲ್ಲೆಯ ಎಲ್ಲ ಮುಸ್ಲಿಮರೂ ಭಾಗಿಯಾದರು. ನಗರದಲ್ಲಿರುವ 10ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಈದ್ಗಾ ಮೈದಾನದಲ್ಲೂ ವಿಶೇಷ ಪ್ರಾರ್ಥನೆ ನಡೆಯಿತು.
ಮಕ್ಕಳು ಹೊಸಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿದರು. ಮನೆಗಳಲ್ಲಿ ವಿಶೇಷ ಭೋಜನದ ವ್ಯವಸ್ಥೆ ಮಾಡಿ, ಬಂಧು ಬಳಗವನ್ನು, ಸ್ನೇಹಿತರನ್ನು ಭೋಜನಕ್ಕೆ ಆಹ್ವಾನಿಸಿದರು. ಬಡವರಿಗೆ ದಾನ ಮಾಡಿದರು.
ಇಲ್ಲಿನ ಸಿಪಿಸಿ ಲೇಔಟ್‌ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿ, ನಗರದ ಜಾಮೀಯಾ ಮಸೀದಿ, ಗಣಪತಿ ಬೀದಿಯಲ್ಲಿನ ಬದ್ರಿಯಾ ಮಸೀದಿ, ಮಲಬಾರ್ ಮಸೀದಿ, ಮಹದೇವಪೇಟೆಯ ಭಟ್ಕಲ್ ಮಸೀದಿ ಸೇರಿದಂತೆ ಎಲ್ಲ ಮಸೀದಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಪಾಜೆ ಸಮೀಪದ ಪೇರಡ್ಕ ಗೂನಡ್ಕ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಬಜೆಗುಂಡಿಯ ಖಿಲಾರಿಯ ಜುಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಅಧ್ಯಕ್ಷ ಕೆ.ಎ.ಯಾಕೂಬ್, ಕಾರ್ಯದರ್ಶಿ ಸುಲೈಮಾನ್, ಉಪಾಧ್ಯಕ್ಷ ಹನೀಫ, ಸಮಿತಿ ಸದಸ್ಯರೂ ಹಾಗೂ ಹಲವು ಮಂದಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಯಾಕೂಬ್, ‘ಎಲ್ಲ ಧರ್ಮಗಳೂ ಮಾನವೀಯ ಸಂಬಂಧಗಳನ್ನು ಬೆಸೆಯುವ ಆಶಯಗಳನ್ನು ಎಲ್ಲ ಧರ್ಮಗಳೂ ಪ್ರತಿಪಾದಿಸಿವೆ ಮತ್ತು ಹಿಂಸೆಯನ್ನು ಕಟುವಾಗಿ ವಿರೋಧಿಸಿವೆ. ಇಸ್ಲಾಂ ಮಾನವೀಯ ಸಂಬಂಧಗಳ ಅಡಿಪಾಯದಲ್ಲಿ ಬೇರೂರಿದೆ’ ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.