ವಿರಾಜಪೇಟೆ : ತ್ಯಾಗ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರುವ ಬಕ್ರೀದ್ ಹಬ್ಬವನ್ನು ಪಟ್ಟಣದ ಮುಸಲ್ಮಾನ್ ಬಾಂಧವರು ಸಂಭ್ರಮ ಸಡಗರದಿಂದ ಶನಿವಾರ ಆಚರಿಸಿದರು.
ಬಕ್ರೀದ್ ಅಂಗವಾಗಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ಹಾಗೂ ಪ್ರವಚನ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಸೇರಿದ್ದರು. ಪಟ್ಟಣದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ. ಹಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಮೌ.ಶುಹೈಬ್ ಫೈಝಿ, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಮ್ನಲ್ಲಿ ಮೌ.ಹಸೀಬ್ ಶರೀಫ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ.ಮುಝಮ್ಮಿಲ್, ಗಡಿಯಾರ ಕಂಬದ ಸಮೀಪದ ಮುರುಡೇಶ್ವರ್ ನವಾಯತ್ ಮಸೀದಿಯಲ್ಲಿ ಮೌ.ಮಖ್ಸೂದ್ ಅಹಮದ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ.ಝಾಹಿದ್, ನೆಹರು ನಗರ ರಸ್ತೆಯ ಮಸ್ಜಿದ್-ಎ-ರಹೀಲ್ನಲ್ಲಿ ಮೌ. ಅಬೂತಾಲಿಬ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ.ಹನೀಫ್ ಫೈಝಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.
ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಬ್ರೈಟ್ ವಿದ್ಯಾಸಂಸ್ಥೆಯ ಕ್ಯಾಂಪಸ್ನ ಈದ್ಗಾಹ್ನಲ್ಲಿ ಮೌ. ಅಬ್ದುಲ್ ರೆಹೆಮಾನ್ ಪಿ.ಬಿ, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಮುಹಮ್ಮದ್ ಅಸ್ಲಮ್ ಮೌಲವಿ ಅವರು ಪ್ರವಚನ ನೀಡಿದರು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಮಾಝ್ ನಂತರ ಸಮುದಾಯ ಬಾಂಧವರು ಪರಸ್ಪರ ಶುಭಾಶಯವನ್ನು ಹಂಚಿ ಮೆರವಣಿಗೆಯಲ್ಲಿ ತೆರಳಿ ಖಬರಸ್ಥಾನದಲ್ಲಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು. ಹನಫಿ ಹಾಗೂ ಶಾಫಿ ವಿಭಾಗದವರು ಒಂದೇ ದಿನ ಹಬ್ಬ ಆಚರಿಸಿದುದು ವಿಶೇಷವಾಗಿತ್ತು. ಅಹಿತಕರ ಘಟನೆಗಳು ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.