ನಾಪೋಕ್ಲು: ಕಾವೇರಿ ತೀರದ ಪವಿತ್ರ ಯಾತ್ರಾಸ್ಥಳ ಬಲಮುರಿಯಲ್ಲಿ ‘ಕಾವೇರಿ ಜಾತ್ರೆ’ ಅಕ್ಟೋಬರ್ 18ರಂದು ಸಂಭ್ರಮದಿಂದ ಜರುಗಲಿದ್ದು ಅಗತ್ಯ ಸಿದ್ಧತೆ ಮಾಡಲಾಗಿದೆ. ಕಣ್ವ ಮುನೀಶ್ವರ ದೇವಾಲಯ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಲಿದೆ. ಭಕ್ತರಿಗಾಗಿ ಗ್ರಾಮಸ್ಥರು ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದಾರೆ.
ತುಲಾಸಂಕ್ರಮಣದಂದು ಕಾವೇರಿಯ ಉಗಮಸ್ಥಾನ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ನಡಿಯಲ್ಲಿ ತೀರ್ಥಸ್ನಾನ ಮಾಡಿ ತೆರಳುವರು. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರುದಿನ ಬಲಮುರಿ ಜಾತ್ರೆ ನಡೆಯುತ್ತದೆ. ಇಲ್ಲಿ ಕಾವೇರಿ ನದಿಯ ಎಡಭಾಗದಲ್ಲಿ ಕಣ್ವಮುನೀಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು, ಸುಂದರವಾದ ಪರಿಸರದಿಂದ ಕೂಡಿದೆ.ಇಲ್ಲಿ ಪಿಂಡ ಪ್ರದಾನ ಮಾಡಿದರೆ ತಲಕಾವೇರಿಯಲ್ಲಿ ಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬುದು ಇಲ್ಲಿನ ನಂಬಿಕೆ.
‘ಪುರಾಣದ ಪ್ರಕಾರ ಕಾವೇರಿ ಮಾತೆಯು ತಾನು ಹರಿದು ಇಲ್ಲಿಗೆ ಬರುವುದಾಗಿ ದೇವಕಾಂತ ಮಹಾರಾಜನಿಗೆ ಸೂಚನೆ ನೀಡಿದ್ದಳು. ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮುನಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠೆ ಮಾಡಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು. ಆದರೆ ಅಗಸ್ತ್ಯೇಶ್ವರ ದೇವಾಲಯ ಹಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದು ತುರ್ತು ಅಭಿವೃದ್ಧಿ ಕಾಣಬೇಕಾದ ಅಗತ್ಯವಿದೆ’ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ.
ಅಗಸ್ತ್ಯಶ್ವರ, ಕಣ್ವಮುನೀಶ್ವರ ದೇವಾಲಯ ಗ್ರಾಮಸ್ಥರ ನೆರವಿನಿಂದ ದೇವಾಲಯ ಅಭಿವೃದ್ಧಿಯಾಗುತ್ತಿದೆ. ದೇವಾಲಯದ ಗರ್ಭಗುಡಿ, ಮುಖಮಂಟಪ ಹಾಗೂ ಪೌಳಿಗಳನ್ನು ಹೊಸತಾಗಿ ನಿರ್ಮಾಣ ಮಾಡಲಾಗಿದೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರುದೇವಾಲಯದ ಬಳಿ ಸ್ವಚ್ಚತಾಕಾರ್ಯ ಕೈಗೊಳ್ಳುತ್ತಾರೆ.
‘ವಲಂಪುರಿ’
ಈಗ ಬಲಮುರಿ ಪುರಾಣದ ಪ್ರಕಾರ ಕಾವೇರಿ ಮಾತೆಯು ತನ್ನ ಮಾತಿನಂತೆ ಕಾವೇರಿ ನದಿಯಾಗಿ ವಲಂಪುರಿಗೆ ಹರಿದು ಬರುವಾಗ ರಭಸದ ಪ್ರವಾಹ ಏರ್ಪಟ್ಟಿತು. ಕಾವೇರಿಯನ್ನು ತಡೆಯಲು ಬಂದ ಮಹಿಳೆಯರ ಸೀರೆ ಸೆರಗು ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ಗಂಟು ಹಾಕಿ ಮಹಿಳೆಯರು ಉಟ್ಟುಕೊಂಡಿದ್ದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮುನಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠೆ ಮಾಡಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು ಎಂಬ ನಂಬಿಕೆ ಇಲ್ಲಿದೆ.
‘ಸರ್ಕಾರಿ ವ್ಯವಸ್ಥೆ ಇಲ್ಲಿಲ್ಲ’
ಪ್ರತಿವರ್ಷ ಬಲಮುರಿ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಪಿಂಡ ಪ್ರದಾನ ಮಾಡುವ ಸ್ಥಳದಲ್ಲಿ ಮೆಟ್ಟಿಲುಗಳ ನಿರ್ಮಿಸುವ ಅವಶ್ಯಕತೆ ಇದೆ. ದೇವಸ್ಥಾನಕ್ಕೆ ತೆರಳಲು ಮಾರ್ಗಸೂಚಿಗಳಿಲ್ಲ. ಭಕ್ತರು ಸುತ್ತು ಬಳಸಿ ದೇವಾಲಯವನ್ನು ತಲುಪಬೇಕಿದೆ. ಮಡಿಕೇರಿಯಿಂದ 18 ಕಿ.ಮೀ. ದೂರದಲ್ಲಿರುವ ಬಲಮುರಿ ತುರ್ತು ಅಭಿವೃದ್ದಿ ಪಡಿಸಬೇಕಾದ ಅಗತ್ಯವಿದೆ ಎಂಬುದು ಕೊಂಗೀರಂಡ ಸಾಧು ತಮ್ಮಯ್ಯ ಅಭಿಪ್ರಾಯ. ‘ತಲಕಾವೇರಿ–ಭಾಗಮಂಡಲ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುವ ಸರ್ಕಾರ ಜಿಲ್ಲೆಯ ಎರಡನೇ ಪುಣ್ಯಕ್ಷೇತ್ರವಾದ ಬಲಮುರಿ ಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸುತ್ತಿದೆ’ ಎಂಬುದು ಇಲ್ಲಿನ ಗ್ರಾಮಸ್ಥರ ನಿಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.