ನಾಪೋಕ್ಲು: ಕೊಡಗಿನಲ್ಲಿ ಮಳೆಗಾಲದಲ್ಲಿ ಬಳಕೆಯಾಗುವ ತರಕಾರಿಗಳ ಪೈಕಿ ಕಣಿಲೆಗೆ ಅಧಿಕ ಬೇಡಿಕೆ. ಕಣಿಲೆಯ ರುಚಿ ಬಲ್ಲವರು ಕಣಿಲೆ ಖರೀದಿಗೆ ಹಾತೊರೆಯುತ್ತಾರೆ. ಆದರೆ, ಮೊದಲಿನಂತೆ ಕಣಿಲೆ ಸಿಗುತ್ತಿಲ್ಲ.
ಒಂದೆಡೆ ನೈಸರ್ಗಿಕವಾಗಿ ಸಿಗುವ ಬಿದಿರಿನ ಎಳೆ ಮೊಳಕೆಯನ್ನು ಪತ್ತೆ ಹಚ್ಚುವ ಅನುಭವಿ ಕಾರ್ಮಿಕರೂ ಇಲ್ಲ. ಮತ್ತೊಂದೆಡೆ ತೋಟ ಮಾಡುವ ಭರದಲ್ಲಿ ಸಾಕಷ್ಟು ಬಿದಿರಿನ ಮೆಳೆಗಳೂ ಈಗ ಇಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಗೆ ಬರುವ ಕಣಿಲೆಯ ಪ್ರಮಾಣ ಇಳಿಮುಖಗೊಳ್ಳುತ್ತಿದೆ. ಅಂತೆಯೇ ಮಳೆಗಾಲದ ವಿಶೇಷ ಆಹಾರವಾದ ಕಣಿಲೆ ನೇಪಥ್ಯಕ್ಕೆ ಸರಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಣಿಲೆಯನ್ನು ಹುಡುಕಬೇಕಾದ ಸ್ಥಿತಿ ಬರಬಹುದು ಎಂಬುದು ಸ್ಥಳೀಯರ ಆತಂಕ.
ಸದ್ಯ, ಈಗ ಹೆಚ್ಚಿನ ಕಡೆ ಸ್ವಾಭಾವಿಕ ಬೆಳೆದ ಕಣಿಲೆಗಿಂತ ಹೆಚ್ಚಾಗಿ ಕೃತಕವಾಗಿ ಬೆಳೆಸಿದ ಕಣಿಲೆಯೇ ಸಿಗುತ್ತಿದೆ.
ಮಳೆಗಾಲದಲ್ಲಿ ತೋಟದಲ್ಲಿ ಸಿಗುವ ಮರಕೆಸುವಿನ ತಿನಿಸುಗಳು, ಹಲಸಿನ ಬೇಳೆಯ ಚಟ್ನಿ, ಓಡುಸೌತೆ (ಬೆಳ್ಳೇರಿ), ದೀವಿ ಹಲಸಿನಂತಹ ತರಕಾರಿಗಳು, ಉಪ್ಪಿನಲ್ಲಿ ಹಾಕಿಟ್ಟ ಹಲಸು, ಮಾವು ಸೇರಿದಂತೆ ವೈವಿಧ್ಯಮಯ ಖಾದ್ಯಗಳು ಮಳೆಗಾಲದಲ್ಲಿ ಬಳಕೆ ಆಗುತ್ತದೆ. ಮಳೆ, ಚಳಿಗೆ ಮೈ ಬೆಚ್ಚಗಾಗಿಸುವ ಆಹಾರ ವಸ್ತುಗಳ ಬಳಕೆ ಜಿಲ್ಲೆಯಲ್ಲಿ ಹೆಚ್ಚು. ಅಂತೆಯೇ ಕಾಡಿನಲ್ಲಿ, ಹೊಳೆ ಬದಿಯಲ್ಲಿ ಸಿಗುವ ಗಿಡಗಳು, ಚಿಗುರುಗಳು ಮೊಳಕೆಗಳು ಹೆಚ್ಚೆಚ್ಚು ಬಳಕೆಯಾಗುತ್ತವೆ.
ಬಿದಿರಿನ ಎಳೆ ಮೊಳಕೆ ಕಣಿಲೆಗೆ ಅತಿ ಹೆಚ್ಚಿನ ಬೇಡಿಕೆ. ರೊಟ್ಟಿ ಹಾಗೂ ಕಣಿಲೆಯ ಪಲ್ಯ ಇಲ್ಲಿನ ವಿಶೇಷ ಖಾದ್ಯ. ಜೊತೆಗೆ ಕಣಿಲೆ ಸಾಂಬಾರು, ಪತ್ರೊಡೆ ಇತ್ಯಾದಿಗಳನ್ನು ಮಾಡಿ ಸೇವಿಸಲಾಗುತ್ತದೆ. ಚೈನೀಸ್ ಹೊಟೇಲುಗಳಲ್ಲಿ ಕಣಿಲೆಯ ಖಾದ್ಯಗಳು ಲಭ್ಯ. ಕೊಡಗಿನ ಮಂದಿ ಕಣಿಲೆಯ ಖಾದ್ಯಗಳನ್ನು ಮಳೆಗಾಲದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬಿದಿರಿನ ಮೆಳೆಗಳಿಂದ ಕಣಿಲೆಯನ್ನು ಅರಸುವ ಗ್ರಾಮೀಣ ಭಾಗದ ಕಾರ್ಮಿಕರು ಮನೆಮನೆಗೆ ಹೊತ್ತೊಯ್ದು ಮಾರಾಟ ಮಾಡುತ್ತಾರೆ. ಮಳೆಗಾಲದಲ್ಲಿ ಕಣಿಲೆಗೆ ಬೇಡಿಕೆ ಹೆಚ್ಚಿದ್ದು, ಶೀಘ್ರವಾಗಿ ಮಾರಾಟವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿದಿರ ಮೆಳೆಗಳ ನಡುವೆ ನುಸುಳಿ ಕಣಿಲೆ ಕತ್ತರಿಸುವ ಅನುಭವಿ ಕಾರ್ಮಿಕರ ಕೊರತೆಯಿಂದ ಕಣಿಲೆ ಸಿಗುವುದು ಕಡಿಮೆಯಾಗುತ್ತಿದೆ.
ನಾಲ್ಕುನಾಡಿನಲ್ಲಿ ಸಾಮಾನ್ಯವಾಗಿ ಕಾವೇರಿ ಹೊಳೆಯ ತೀರಗಳಲ್ಲಿ ಬಿದಿರ ಮೆಳೆಗಳಿದ್ದು, ಮಳೆ ಬಂದು ತಂಪಾದಾಗ ಬಿದಿರ ಮೊಳಕೆಗಳು ಮೇಲೇಳುತ್ತವೆ. ಅದನ್ನು ಎಚ್ಚರಿಕೆಯಿಂದ ಕತ್ತರಿಸಿ ತಂದು ಕಾರ್ಮಿಕರು ಮಾರಾಟ ಮಾಡುತ್ತಾರೆ. ಈ ಕತ್ತರಿಸಿದ ಭಾಗಗಳನ್ನು ಹಾಗೆಯೇ ಬಳಸುವಂತಿಲ್ಲ. 2-3 ದಿನ ನೀರಿನಲ್ಲಿ ನೆನೆಸಿಟ್ಟು ಮತ್ತೆ ಬಳಕೆ ಮಾಡಬೇಕು. ಆಗಷ್ಟೇ ಕಣಿಲೆಯ ರುಚಿ, ಸ್ವಾದ ಚುರುಕು ಮುಟ್ಟಿಸುತ್ತದೆ. ಕಳಲೆಯ ಪಲ್ಯ, ಸಾಂಬಾರು, ಪತ್ರೊಡೆ..ಹೀಗೆ ವೈವಿಧ್ಯಮಯ ತಿನಿಸುಗಳು ಜನಪ್ರಿಯ.
ಕೊಡಗಿನಲ್ಲಿ ಆಯಾಯ ಕಾಲಮಾನಕ್ಕೆ ತಕ್ಕಂತೆ ಸುತ್ತಲಿನ ಪ್ರದೇಶದಲ್ಲಿ ದೊರೆಯುವ ಸಸ್ಯಗಳಿಂದ ದೊರೆಯುವ ಉತ್ಪನ್ನಗಳನ್ನೇ ಬಳಸಿಕೊಂಡು ಖಾದ್ಯ ತಯಾರಿಸಿ ಸೇವಿಸುತ್ತಾ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿದೆ.
ಮಳೆಗಾಲ ಎಂದರೆ ಕೊಡಗಿನ ಮಟ್ಟಿಗೆ ಅದೊಂದು ವಿಭಿನ್ನ ಅನುಭವ. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಡೀ ವಾತಾವರಣವೇ ತೇವಾಂಶದಿಂದ ಕೂಡಿರುವ ಕಾರಣ ದೇಹವನ್ನು ಬೆಚ್ಚಗಿಟ್ಟು ಶೀತಬಾಧೆಯಿಂದ ತಪ್ಪಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ತಮ್ಮ ಸುತ್ತ ಹಾಗೂ ಕಾಡುಗಳಲ್ಲಿ ದೊರೆಯುವ ಅಣಬೆ, ಬಿದಿರಿನಿಂದ ದೊರೆಯುವ ಕಣಿಲೆ, ನದಿ, ಹೊಳೆಯಲ್ಲಿ ದೊರೆಯುವ ಏಡಿ, ಕೆಸವಿನ ಸೊಪ್ಪು ಸೇರಿದಂತೆ ಕೆಲವು ಸೊಪ್ಪುಗಳನ್ನು ಆಹಾರವಾಗಿ ಬಳಸುವ ಮೂಲಕ ದೇಹಕ್ಕೆ ಬೇಕಾದ ಶಕ್ತಿಗಳನ್ನು ಪಡೆದು ಕೊಳ್ಳುವುದಲ್ಲದೆ, ತರಕಾರಿಯ ಸಮಸ್ಯೆಯನ್ನು ನೀಗಿಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಬಂದಿದೆ.
‘ಸಾಂಪ್ರದಾಯಿಕ ತಿನಿಸುಗಳಿಂದ ಆರೋಗ್ಯ’
‘ಹಿಂದಿನ ಕಾಲದಲ್ಲಿ ಮಳೆಗಾಲ ಆರಂಭವಾದರೆ ಹೊರಗೆ ಓಡಾಡುವುದು ಕಷ್ಟವಾಗಿತ್ತು. ಇಂತಹ ಸಂದರ್ಭಗಳಲ್ಲಿ ಪೇಟೆ ಪಟ್ಟಣಗಳಿಂದ ದೂರವಿದ್ದ ಜನರು ತಮ್ಮ ಸುತ್ತಮುತ್ತ ಸಿಗುವುದನ್ನೇ ಆಹಾರಕ್ಕೆ ಬಳಸಿಕೊಳ್ಳುತ್ತಿದ್ದರು. ಅದರಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುತ್ತಿದ್ದರಿಂದ ಆರೋಗ್ಯವನ್ನು ಕಾಪಾಡುತ್ತಿತ್ತು. ಯಾವ ಸಸ್ಯಗಳು ಆರೋಗ್ಯಕ್ಕೆ ಹಿತಕಾರಿಯಾಗಿದ್ದವೋ ಅವುಗಳನ್ನು ಎಲ್ಲರೂ ಸೇವಿಸಲು ಅನುಕೂಲವಾಗುವಂತೆ ಸಂಪ್ರದಾಯ ಮಾಡಿದರು. ಅಷ್ಟೇ ಅಲ್ಲದೆ ಅದನ್ನು ಪಾಲಿಸುತ್ತಾ ಬಂದರು’ ಎನ್ನುತ್ತಾರೆ ಸ್ಥಳೀಯ ವೈದ್ಯ ವಲ್ಲಂಡ ಚಂಗಪ್ಪ. ಕೊಡಗಿನಲ್ಲಿ ಮಳೆಗಾಲದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಬೇಕೆನ್ನುವ ಸಂಪ್ರದಾಯಗಳು ಇವತ್ತಿಗೂ ಜನರ ಆರೋಗ್ಯ ಕಾಪಾಡುತ್ತಿವೆ. ಅದರಲ್ಲಿ ಕಣಿಲೆಯ ತಿನಿಸುಗಳೂ ಒಂದು.
ಬಳಸುವಾಗ ಎಚ್ಚರ
ಬಿದಿರನ್ನು ಆಹಾರಕ್ಕಾಗಿ ವಿವಿಧ ದೇಶಗಳಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ನೈಸರ್ಗಿಕ ಬಿದಿರಿನಿಂದ ಮೂಡುವ ಮೊಳಕೆಗಳಿಂದ ಕಣಿಲೆಯನ್ನು ಪಡೆಯಲಾಗುತ್ತದೆ. ಇದಕ್ಕೆ ಕಳಲೆ ಕಣಿಲೆ ಬಿದಿರು ಕಳ್ಳೆ ಎಂಬ ಹೆಸರುಗಳು ಇವೆ. ಇದನ್ನು ನೇರವಾಗಿ ಸೇವಿಸುವಂತಿಲ್ಲ. ವಿಷಕಾರಿ ಟಾಕ್ಸಿನ್ ಅಂಶ ಇರುವುದರಿಂದ ಕಳಲೆ ಬೇಯಿಸುವುದಕ್ಕಿಂತ ಮೊದಲು ಕುದಿಸಿ ನೀರನ್ನು ಹೊರ ಚೆಲ್ಲಬೇಕು. ಸ್ಥಳೀಯವಾಗಿ ಕಣಿಲೆ ಬಳಸುವ ಮುನ್ನ ಮೂರು ದಿನ ನೆನೆಸಿ ನೀರು ಬದಲಾಯಿಸಿ ಬಳಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.