
ಕುಶಾಲನಗರ : ಸಿಡಿಮದ್ದಿನ ಆರ್ಭಟ, ಆಕಾಶದಲ್ಲಿ ಬಿರುಸು ಬಾಣಗಳ ವರ್ಣಚಿತ್ತಾರ, ಗ್ರಾಮದಲ್ಲಿ ವಿದ್ಯುತ್ ದೀಪಗಳಿಂದ ಸಿಂಗಾರ. ಜನಸಾಗರದ ಮಧ್ಯೆ ಹಾದು ಹೋಗುವ ಉತ್ಸವ ಮಂಟಪಗಳ ಶೋಭಾಯಾತ್ರೆ. ಕಂಸಾಳೆ, ವೀರಭದ್ರೇಶ್ವರ ಕುಣಿತದ ಮೆರುಗು. ಇವು ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಕಂಡು ಬರುವ ವೈಶಿಷ್ಟ್ಯಗಳು.
ಗ್ಹಾಮದೇವತೆ ಬನಶಂಕರಿಯ ವಾರ್ಷಿಕ ಹಬ್ಬ ನ.21 ರಂದು ನಡೆಯಲಿದ್ದು, ಆರಾಧ್ಯ ದೇವಿ ಉತ್ಸವಕ್ಕಾಗಿ ಇಡೀ ಹೆಬ್ಮಾಲೆ ಗ್ರಾಮವೇ ಸಿಂಗಾರಗೊಳ್ಳುತ್ತಿದೆ. ತಾಲ್ಲೂಕಿನ ಬಯಲು ಸೀಮೆ ಪ್ರದೇಶ, ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮದ ಗ್ರಾಮದೇವತೆಯ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಬಸವೇಶ್ವರ ಹಾಗೂ ಬನಶಂಕರಿ ದೇವಾಲಯ ಸಮಿತಿಯಿಂದ ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಬ್ಬವನ್ನು ಮಿನಿ ಮಡಿಕೇರಿ ದಸರಾ ಮಾದರಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಹೆಬ್ಬಾಲೆ ಹಾಗೂ ಸುತ್ತಲಿನ ಗ್ರಾಮಸ್ಥರು ಶಕ್ತಿ ದೇವತೆ ಬನಶಂಕರಿ ದೇವಿಯನ್ನು ಆರಾಧಿಸುತ್ತಿದ್ದಾರೆ. ಹಬ್ಬಕ್ಕೆ ವಿವಿಧೆಡೆ ನೆಲೆಸಿರುವ ಗ್ರಾಮಸ್ಥರು ತಪ್ಪದೇ ಪಾಲ್ಗೊಳ್ಳುತ್ತಾರೆ. ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಪಾಲ್ಗೊಂಡು ದೇವಿ ದರ್ಶನ ಪಡೆಯುತ್ತಾರೆ. ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ , ಒಂದೊಂದು ಸೇವೆ ವಹಿಸಿಕೊಂಡು ಹಬ್ಬದ ಯಶಸ್ಸಿಗೆ ಶ್ರಮಿಸುತ್ತಾರೆ.
ಗ್ರಾಮದ ವಿವಿಧ ಬ್ಲಾಕ್ (ಬೀದಿ)ಗಳ ಉತ್ಸವ ಸಮಿತಿ ಉತ್ಸವ ಮಂಟಪಗಳನ್ನು ಸಿದ್ಧಪಡಿಸಿ ಬಸವೇಶ್ವರ ದೇವಾಲಯ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸುತ್ತಿದ್ದು ದೇವಿಯ ಶೋಭಾಯಾತ್ರೆಗೆ ಮೆರಗು ನೀಡುತ್ತದೆ. ಆಕರ್ಷಕ ಮದ್ದುಗುಂಡು ಬಾಣಬಿರುಸುಗಳ ಪ್ರದರ್ಶನ ಹಬ್ಬಕ್ಕೆ ವಿಶೇಷ ಆಕರ್ಷಣೆಯಾಗಿದೆ.
ದೇಗುಲದಲ್ಲಿ ಅಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಪೂಜೆ,ಪುಣಾಹ, ರಕ್ಷಾಬಂಧನ ಧ್ವಜಾರೋಹಣ, ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಡೆಸುವರು. ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ್ ಮತ್ತು ಕಾರ್ಯದರ್ಶಿ ಎಚ್.ಟಿ.ಸೋಮಣ್ಣ, ಸದಸ್ಯರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿವೆ. ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ , ರಾತ್ರಿ 9 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಿ, 9 ದಿವಸ ಉಪವಾಸ ವ್ರತ ಆಚರಿಸಿ ಹರಕೆ ಹೊತ್ತ ಭಕರು ಅಗ್ನಿ ಹಾಯ್ದು, ದೇವಿಗೆ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನ ಸಮಿತಿಯಿಂದ ರಾತ್ರಿ ಭಕ್ತರಿಗೆ ಅನ್ನಸಂರ್ತಪಣೆ ವ್ಯವಸ್ಥೆ ಕೈಗೊಳ್ಳಲಾಗಿದೆ.
ಗ್ರಾಮವನ್ನು ಹಸಿರು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ. ಇಡೀ ಗ್ರಾಮವನ್ನು ಶುಚ್ಚಿಗೊಳಿಸುವ ಕಾರ್ಯವನ್ನು ಪಂಚಾಯಿತಿಯಿಂದ ಕೈಗೊಳ್ಳಲಾಗಿದೆ.
ಕೃಷ್ಣದೇವರಾಯರ ಆಳ್ವಿಕೆ: ವಿಜಯನಗರ ಕೃಷ್ಣದೇವರಾಯರ ಆಳ್ವಿಕೆ ಸಂದರ್ಭ ಬನಶಂಕರಿ ದೇವಸ್ಥಾನ ನಿರ್ಮಿಸಲಾಗಿದೆ. ವಿಜಯನಗರ ಮತ್ತು ಬಾದಾಮಿ ಮೇಲೆ ಮಹಮ್ಮದ್ ಘಜ್ನಿ ದಾಳಿ ನಡೆಸಿದ ಸಂದರ್ಭ ಅಲ್ಲಿಂದ ವಲಸೆ ಬಂದ ಸೈನ್ಯ ಮತ್ತು ಜನರು ಹೆಬ್ಬಾಲೆ ಗ್ರಾಮದ ದಟ್ಟಾರಣ್ಯದ ಬಳಿ ವಾಸವಾಗಿದ್ದರು. ತಮ್ಮ ಕುಲದೇವತೆ ಬನಶಂಕರಿಯ ಕಲ್ಲಿನ ವಿಗ್ರಹವನ್ನು ತಂದ ಸೈನ್ಯದ ನಾಯಕ ತಿಮ್ಮನಾಯಕ ಹೆಬ್ಬಾಲೆಯಲ್ಲಿ ಕಲ್ಲಿನ ಚಪ್ಪಡಿಗಳನ್ನು ಬಳಸಿಕೊಂಡು ಸಣ್ಣ ಗುಡಿ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದರು ಎಂಬುದು ಪ್ರತೀತಿ.
ಕ್ರೀಡಾಕೂಟ ಮಾದರಿ
ಯುವಕ ಸಂಘದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಥಮಿಕ ಶಾಲಾ ಮೈದಾನದಲ್ಲಿ ನ. 22 ರ ವರೆಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ. ನ.22 ರಂದು ರಾಜ್ಯ ಮಟ್ಟದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಜೊತೆಗೆ ಗ್ರಾಮೀಣ ಕ್ರೀಡಾಕೂಟಗಳು ನಡೆಲಿವೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.