ADVERTISEMENT

River Rafting : ಬರಪೊಳೆಯಲ್ಲಿ ಭರಪೂರ ಜಲಸಾಹಸ...

ಜೆ.ಸೋಮಣ್ಣ
Published 3 ಆಗಸ್ಟ್ 2025, 4:54 IST
Last Updated 3 ಆಗಸ್ಟ್ 2025, 4:54 IST
ಹಸಿರು ಮರಗಿಡಗಳ ನಡುವೆ ಬರಪೊಳೆ
ಹಸಿರು ಮರಗಿಡಗಳ ನಡುವೆ ಬರಪೊಳೆ   

ಗೋಣಿಕೊಪ್ಪಲು: ಹಸಿರು ಸೊಬಗಿನ ದಟ್ಟ ಗಿಡ ಮರಗಳ ನಡುವೆ ಭೋರ್ಗರೆಯುತ್ತಾ ಹರಿಯುವ ಬರಪೊಳೆಯಲ್ಲಿ ಸಾಹಸಮಯ ರ‍್ಯಾಫ್ಟಿಂಗ್ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕಲ್ಲುಬಂಡೆಗಳ ನಡುವೆ ಹಾಲ್ನೊರೆ ಚೆಲ್ಲುತ್ತಾ ಮುನ್ನುಗ್ಗುವ ನದಿಯಲ್ಲಿ ರ‍್ಯಾಫ್ಟಿಂಗ್ ಕ್ರೀಡೆ ಎಡೆಬಿಡದೆ ಸಾಗುತ್ತಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಹಸಿರು ಮುಕ್ಕುವ ಗಿಡಮರಗಳ ನಡುವೆ ಪರಿಶುದ್ಧವಾಗಿ ಹರಿಯುವ ನದಿ ನೀರಿನಲ್ಲಿ ರ‍್ಯಾಫ್ಟಿಂಗ್ ನಡೆಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆಗಾಗ್ಗೆ ಸುರಿಯುವ ಮಳೆಯ ನಡುವೆಯೂ ಜೀವ ರಕ್ಷಕ ಜಾಕೇಟ್ ಧರಿಸಿ, ಕೈಯಲ್ಲಿ ಪೆಡಲ್‌ಗಳಿಂದ ನೀರು ಬಗೆಯುವ ಮಾರ್ಗದರ್ಶಕರ ಸಮ್ಮುಖದಲ್ಲಿ ನದಿಯಲ್ಲಿ ತೇಲುತ್ತಾ ಆನಂದಿಸುತ್ತಿದ್ದಾರೆ.

ಬಿರುನಾಣಿ, ಟಿ.ಶೆಟ್ಟಿಗೇರಿ ಭಾಗದ ಟಿ.ಎಸ್ಟೇಟ್ ಬಳಿ ಹರಿಯುವ ನದಿಯ ದಡಕ್ಕೆ ತೆರಳಲು ಉತ್ತಮ ಡಾಂಬಾರ್ ರಸ್ತೆ ಇದೆ. ಕಣ್ಣಿಗೆ ಇಂಪು ನೀಡುವ ವಿಶಾಲವಾದ ಟಾಟಾ ಕಂಪೆನಿಯ ಟಿ.ಎಸ್ಟೇಟ್ ವೀಕ್ಷಿಸುತ್ತಾ ಮುಂದೆ ಸಾಗಿದರೆ ಅನತಿ ದೂರಿದಲ್ಲಿಯೇ ಬರಪೊಳೆ ರ‍್ಯಾಫ್ಟಿಂಗ್ ಸ್ಥಳ ಎದುರಾಗುತ್ತದೆ.

ADVERTISEMENT

ಪೊನ್ನಂಪೇಟೆ ತಾಲ್ಲೂಕಿನ ಕೆಕೆಆರ್ ಎಂಬಲ್ಲಿರುವ ಬರಪೊಳೆಯು ಸಮುದ್ರಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದಲ್ಲಿ ಹರಿಯುತ್ತಿದೆ. ಬಂಡೆಕಲ್ಲುಗಳ ನಡುವೆ ಭೋರ್ಗರೆಯುವ ಈ ನದಿಯಲ್ಲಿ ಜಲಕ್ರೀಡೆ ನಡೆಸುವುದು ಮೈಮನಗಳಿಗೆ ಪುಳಕ ನೀಡುತ್ತದೆ. ಎದ್ದು, ಬಿದ್ದು ಸಾಗುವ ಹಾದಿಯಲ್ಲಿ ರ‍್ಯಾಫ್ಟಿಂಗ್ ನಡೆಸುವಾಗ ಜೀವ ಹೋಗಿ ಮತ್ತೆ ಬರುವ ಅನುಭವ ಮೂಡಿಸುವುದು ಸಹಜ. ನದಿಯಲ್ಲಿ ಸುಮಾರು 4.5 ಕಿಲೋಮೀಟರ್ ದೂರದ ಪಯಣದಲ್ಲಿ ನಿತ್ಯವೂ 5 ರ‍್ಯಾಪಿಡ್ಸ್‌ಗಳು ಪ್ರವಾಸಿಗರನ್ನು ಹೊತ್ತೊಯ್ಯುತ್ತವೆ.

ನದಿ ಹೆಚ್ಚು ಇಳಿಜಾರಿನಿಂದ ಕೂಡಿದ್ದು ಬಂಡೆಗಳ ಸಿಕ್ಕಿದಾಗ ರ‍್ಯಾಫ್ಟಿಂಗ್ ದೋಣಿ ದಿಢೀರನೆ ಮುಳುಗುತ್ತದೆ. ಬಳಿಕ ಮೇಲೆದ್ದು ಮುಂದೆ ಸಾಗುತ್ತದೆ. ಆದರೆ, ಮಾರ್ಗದರ್ಶಕರು ಇರುವುದರಿಂದ ಅಂತಹದ್ದೇನು ಭಯವಾಗುವುದಿಲ್ಲ. ಆದರೂ, ರಕ್ತದೊತ್ತಡ ಹಾಗೂ ತಲೆ ಸುತ್ತು ಇರುವವರಿಗೆ ಇಲ್ಲಿ ಆದ್ಯತೆ ಕಡಿಮೆ.

ರ‍್ಯಾಫ್ಟಿಂಗ್ ಆರಂಭವಾಗುವ ಸ್ಥಳದಿಂದ 4.5 ಕಿ.ಮೀ ದೂರ ಸಾಗಿ ಬಳಿಕ ಟಿ.ಎಸ್ಟೇಟ್ ದಡದಲ್ಲಿ ಮುಕ್ತಾಯವಾಗುತ್ತದೆ. ಅಲ್ಲಿಂದ ಆಯೋಜಕರು ಮತ್ತೆ ರ‍್ಯಾಫಿಡ್‌ಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಆರಂಭಿಕ ಸ್ಥಳಕ್ಕೆ ಬರುತ್ತಾರೆ. ಪ್ರವಾಸಿಗರು ಕೂಡ ವಾಹನ ಅಥವಾ ಪ್ರಕೃತಿ ಸೊಬಗನ್ನು ಸವಿಯುತ್ತಾ ನಡೆದುಕೊಂಡು ಹಿಂದಿರುಗುತ್ತಾರೆ.

ಈ ಬಾರಿ ಜೂನ್‌ಲ್ಲಿಯೇ ರ‍್ಯಾಫ್ಟಿಂಗ್ ಆರಂಭ

ಮುಂಗಾರು ಮಳೆ ಈ ಬಾರಿ ಜೂನ್‌ನಲ್ಲಿಯೇ ಆರಂಭಗೊಂಡಿದ್ದರಿಂದ ರ‍್ಯಾಫ್ಟಿಂಗ್ ಕೂಡ ಬೇಗನೆ ಆರಂಭಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ರ‍್ಯಾಫ್ಟಿಂಗ್ ಪ್ರಾಯೋಜಕ ಕುಂಞಂಗಡ ಬೋಸ್ ಮಾದಪ್ಪ 20 ವರ್ಷಗಳಿಂದ ರ‍್ಯಾಫ್ಟಿಂಗ್ ನಡೆಸಿಕೊಂಡು ಬರಲಾಗುತ್ತಿದೆ. ಇದೊಂದು ಸಾಹಸಮಯ ಕ್ರೀಡೆಯಾಗಿದ್ದು ಜೀವಕ್ಕೆ ಯಾವುದೇ ಬಗೆಯ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ. ರ‍್ಯಾಫ್ಟಿಂಗ್‌ಗೆ ಬೇಕಾದ ಜೀವರಕ್ಷಕ ಜಾಕೆಟ್, ಹೆಲ್ಮೆಟ್ ಹಾಗೂ ಪೆಡಲ್‌ಗಳನ್ನು ಪ್ರತಿ ಬಾರಿಯೂ ಪರಿಶೀಲಿಸಿ ಅಗತ್ಯವಿದ್ದಲ್ಲಿ ಬದಲಾಯಿಸಲಾಗುವುದು ಎಂದು ಹೇಳಿದರು.

ಪ್ರತಿ ವರ್ಷ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ ಫಿಟ್ನೆಸ್ ಟೆಸ್ಟ್ ಮಾಡಲಾಗುವುದು. ರ‍್ಯಾಫ್ಟಿಂಗ್ ನಡೆಸಲು ಉತ್ತಮ ತರಬೇತಿ ಹೊಂದಿರುವ ಉತ್ತರ ಭಾರತದ ತರಬೇತುದಾರರನ್ನು ನೇಮಿಸಿಕೊಳ್ಳಲಾಗಿದೆ. ಇವರೆಲ್ಲ ಗಂಗಾ ಯಮುನಾ ನದಿ ಹಾಗೂ ಹಿಮಾಲಂಯ ಪರ್ವದ ನದಿಗಳಲ್ಲಿ ರ‍್ಯಾಫ್ಟಿಂಗ್ ನಡೆಸಿದವರಾಗಿದ್ದಾರೆ ಎಂದು ಮಾಹಿತಿ ನೀಡಿದರು. ರ‍್ಯಾಫ್ಟಿಂಗ್ ನಿರ್ವಹಣಾ ಸಮಿತಿ ಇದ್ದು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಬೋಸ್ ಮಾದಪ್ಪ ಅವರೊಂದಿಗೆ ಕೂರ್ಗ್ ವಾಟರ್ ಸ್ಪೋರ್ಸ್ ಅಂಡ್ ಅಡ್ವೆಂಚರ್ ಪ್ರಾಯೋಜಕರಾದ ಪವನ್, ಕೊಡಗು ವೈಟ್ ವಾಟರ್ ರ‍್ಯಾಫ್ಟಿಂಗ್ ಪ್ರಾಯೋಜಕರಾದ ಚೋನೀರ ರತನ್, ನಿತಿನ್, ಕೂರ್ಗ್ ರಿವರ್ಸ್ ರ‍್ಯಾಫ್ಟಿಂಗ್ ಪ್ರಾಯೋಜಕ ಸೋಮಣ್ಣ, ಚಟ್ಟಂಗಡ ಮಹೇಶ್ ಮೊದಲಾದವರು ಈ ಸಾಹಸಮಯ ಕ್ರೀಡೆಯ ಜವಾಬ್ದಾರಿ ಹೊತ್ತಿದ್ದಾರೆ.

ಗೋಣಿಕೊಪ್ಪಲು ಬಳಿಯ ಬಿರುನಾಣಿ ಟಿ.ಶೆಟ್ಟಿಗೇರಿ ನಡುವಿನ ಬರಪೊಳೆಯಲ್ಲಿ ಸಾಗುತ್ತಿರುವ ರ್‍ಯಾಫ್ಟಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.