ಮಡಿಕೇರಿ: ಯಾವುದೇ ರೀತಿಯ ಅವಘಡಗಳು ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚರ ವಹಿಸುವುದು ಅಗತ್ಯ. ಆದ್ದರಿಂದ ಆಡಳಿತ ವ್ಯವಸ್ಥೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಳೆ ಮಾಹಿತಿ ನೀಡುವುದರ ಜೊತೆಗೆ ಅಧಿಕಾರಿಗಳು ಸದಾ ಎಚ್ಚರವಹಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮತ್ತಷ್ಟು ಹೆಚ್ಚಿನ ಎಚ್ಚರವಹಿಸಬೇಕು. ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ನದಿ ಪಾತ್ರದಲ್ಲಿನ ಕುಟುಂಬಗಳು ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಜನರ ಸುರಕ್ಷತೆ ಮತ್ತು ರಕ್ಷಣೆ ಅತೀ ಮುಖ್ಯ ಎಂಬುದನ್ನು ಯಾರೂ ಮರೆಯಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೂಡಲೇ ಹಳೇ ಮರಗಳನ್ನು ತೆರವುಗೊಳಿಸಬೇಕು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಹೇಳಿದರು.
ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಯುವುದು, ಹಳೇ ಮರಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಗಮನಕ್ಕೆ ತರುವುದು, ಚರಂಡಿ ಸರಿಪಡಿಸುವುದು, ಮತ್ತಿತರ ಕೆಲಸವನ್ನು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವು ನಿರ್ವಹಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ, ಅಡುಗೆ ಮನೆ ಇರಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಪ್ರವಾಹ ಪೀಡಿತ ಪ್ರದೇಶದ ಕುಟುಂಬಗಳಿಗೆ ಪ್ರತೀ ವರ್ಷ ನೋಟೀಸು ನೀಡುವುದು ಸರಿಯಲ್ಲ. ಆದ್ದರಿಂದ ಪ್ರವಾಹ ಪೀಡಿತ ಕುಟುಂಬಗಳಿಗೆ ಹತ್ತಿರದಲ್ಲಿ ನಿವೇಶನ ಒದಗಿಸಿ ಮನೆ ನಿರ್ಮಿಸಬೇಕು. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳ ಪಟ್ಟಿ ಮಾಡುವಂತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಬಾರಿ ಮುಂಗಾರು ಮೇ ತಿಂಗಳಲ್ಲಿಯೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು. ಆದ್ದರಿಂದ ಕಂದಾಯ, ಪೊಲೀಸ್, ಲೋಕೋಪಯೋಗಿ, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಅಗ್ನಿಶಾಮಕ ಹೀಗೆ ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಮಡಿಕೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿ ಹೊದ್ದೂರು, ಮೂರ್ನಾಡು, ಕಡಗದಾಳು, ಹಾಗೆಯೇ ಸೂಕ್ಷ್ಮ ಪ್ರದೇಶಗಳಾದ ಮಕ್ಕಂದೂರು, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 342 ಕುಟುಂಬಗಳಿಗೆ ಎಚ್ಚರಿಕಾ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ, ‘ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಜನರು ಆಯಾಯ ಪ್ರದೇಶದಲ್ಲಿ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಹತ್ತಿರದ ಸಂಬಂಧಿಕರ ಮನೆಗೆ ಅಥವಾ ಕಾಳಜಿ ಕೇಂದ್ರಕ್ಕೆ ತೆರಳಲಿದ್ದಾರೆ. ಆ ನಿಟ್ಟಿನಲ್ಲಿ ಮುನ್ನೆಚ್ಚರ ವಹಿಸಲಾಗಿದೆ’ ಎಂದು ಹೇಳಿದರು.
ಈ ವೇಳೆ ಮಾತನಾಡಿದ ತ್ರೈಮಾಸಿಕ ಕೆಡಿಪಿ ಸದಸ್ಯರಾದ ಶ್ಯಾಮ್ ಸುಬ್ಬಯ್ಯ, ‘ಕೊಡಗು ಜಿಲ್ಲೆಯ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದೆ. ಹಲವು ಕುಟುಂಬಗಳು 7 ವರ್ಷದಿಂದ ಮನೆ ಕೇಳುತ್ತಿದ್ದಾರೆ. ಇನ್ನೂ ಸಹ ಮನೆ ಒದಗಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಕ್ರಿಯಿಸಿದ ಡಾ.ಮಂತರ್‌ಗೌಡ ಉಪ ವಿಭಾಗಾಧಿಕಾರಿ ಅವರ ಜೊತೆ ಚರ್ಚಿಸಿ ಮನೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿವಿಧ ಇಲಾಖೆಗಳು ಹಳೇ ಮರಗಳನ್ನು ತೆರವುಗೊಳಿಸಲು ಅನುಮತಿ ಕೇಳಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕೂಡಲೇ ಅನುಮತಿ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸೂಚಿಸಿದರು.
ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ‘ಅಪಾಯ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು’ ಎಂದು ಸಭೆಯ ಗಮನಕ್ಕೆ ತಂದರು.
ಪಂಚಾಯತ್ ರಾಜ್ ಎಂಜಿನಿಯರ್ ಭಾಸ್ಕರ್, ಸೆಸ್ಕ್ ಎಂಜಿನಿಯರ್ ರಾಮಚಂದ್ರ, ವಿಜಯಕುಮಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಿರೀಶ್, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಅಬ್ದುಲ್ ರಜಾಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.