
ಸೋಮವಾರಪೇಟೆ: ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯದ್ದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆ ಸಚಿವ ಎಸ್.ಮಧು ಬಂಗಾರಪ್ಪ ಶ್ಲಾಘಿಸಿದರು.
ಇಲ್ಲಿಗೆ ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುವುದರೊಂದಿಗೆ, ರಾಜ್ಯಕ್ಕೆ ಗುಂಡೂರಾವ್, ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿಗಳನ್ನು ನೀಡಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ, ಸಾಕಷ್ಟು ಸವಲತ್ತುಗಳೂ ಸಿಗುತ್ತಿವೆ. ಶಿಕ್ಷಕರು ರಾತ್ರಿ ಸಮಯದಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಲು ಹಾಗೂ ಮಕ್ಕಳಿಗೆ ಗುಣತ್ಮಕ ಕಂಪ್ಯೂಟರ್ ಶಿಕ್ಷಣವನ್ನು ಒದಗಿಸುವ ದೃಷ್ಟಿಯಿಂದ ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದರು.
ಮಲೆನಾಡಿನ ಭಾಗಗಳಲ್ಲಿ ಸಾಕಷ್ಟು ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಟ್ಟಡದ ಅಭಿವೃದ್ಧಿಗೆ ಹಂತ ಹಂತವಾಗಿ ಹಣ ನೀಡಲಾಗುವುದು ಎಂದರು.
ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ವಿದ್ಯಾಭ್ಯಾಸ ಮೊಟುಕುಗೊಳಿಸಬಾರದು ಎಂಬ ಸದುದ್ದೇಶದಿಂದ ಒಟ್ಟು 3 ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಶೇ 79.89ರಷ್ಟು ವಿದ್ಯಾರ್ಥಿಗಳು ತಮ್ಮ ಸ್ವಂತ ಪರಿಶ್ರಮದ ಮೇಲೆ ಉತ್ತೀರ್ಣರಾಗಿದ್ದಾರೆ ಎಂದರು.
ಈ ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಶೇ 20ರಷ್ಟು ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರು ಎಂಬ ವರದಿಯಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಪರೀಕ್ಷೆಯನ್ನು ಬರೆಯುವಂತಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗಾಗಿ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಕ್ರಮ ಕೈಗೊಂಡಿದೆ. ಶಿಕ್ಷಕರ ತರಬೇತಿ, ಡಿಜಿಟಲ್ ತರಗತಿಗಳ ವಿಸ್ತರಣೆ, ಹಾಗೂ ವಿದ್ಯಾರ್ಥಿ ಸ್ನೇಹಿ ಪರಿಸರ ನಿರ್ಮಾಣ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪ್ರಸಾದ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಪ್ರಭುದೇವ್, ಗೌರವ ಅಧ್ಯಕ್ಷ ಕೆ.ಡಿ.ಕುಮಾರ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಪಿ.ಉಲ್ಲಾಸ್, ಬೇಳೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸುದರ್ಶನ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಡಾ.ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಡಿಡಿಪಿಯು ಚಿದಾನಂದ ಮೂರ್ತಿ, ಡಿಡಿಪಿಐ ಬಸವರಾಜು, ಡಾ.ವೇಣುಗೋಪಾಲ್, ತಹಶೀಲ್ದಾರ್ ಕೃಷ್ಣಮೂರ್ತಿ, ಬಿಇಒ ಕೃಷ್ಣಪ್ಪ, ಬಿ.ಬಿ.ಸತೀಶ್ ಭಾಗವಹಿಸಿದ್ದರು.
ಸರ್ಕಾರಿ ಶಾಲೆಗಳು ಮಕ್ಕಳ ಭವಿಷ್ಯ ಕಟ್ಟುವ ಅಡಿಪಾಯಗಳು:
ಶಾಸಕ ಶಾಸಕ ಡಾ.ಮಂತರ್ ಗೌಡ ಮಾತನಾಡಿ ‘ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮಕ್ಕಳ ಭವಿಷ್ಯ ಕಟ್ಟುವ ನಿಜವಾದ ಅಡಿಪಾಯಗಳಾಗಿವೆ. ಬೇಳೂರು ಶಾಲೆಯು ಶತಮಾನದಿಂದಲೂ ಈ ದಿಸೆಯಲ್ಲಿ ಮಾಡಿದ ಸೇವೆ ಶ್ಲಾಘನೀಯ’ ಎಂದು ಹೇಳಿದರು. ಬೇಳೂರು ಶಾಲೆಯಂತಹ ಹಳೆಯ ಸಂಸ್ಥೆಗಳು ಹೊಸ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.