
ಕುಶಾಲನಗರ: ಹಿಂದೂ ಸಮುದಾಯ ಸಂಘಟಿತವಾಗುವ ಮೂಲಕ ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ, ಆಚಾರ– ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಮತ್ತು ಹೆಬ್ಬಾಲೆ ಮಂಡಲದ ವತಿಯಿಂದ ಶುಕ್ರವಾರ ಹೆಬ್ಬಾಲೆ ಬನಶಂಕರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹಿಂದೂ ಸಂಗಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಪುರಾತನ ಧರ್ಮ ನಮ್ಮ ಹಿಂದೂ ಧರ್ಮ. ಮಹಾನ್ ತ್ಯಾಗಿಗಳು, ಋಷಿಮುನಿಗಳು, ಮಹರ್ಷಿಗಳು ಇರುವಂತಹ ಶ್ರೇಷ್ಠ ಸನಾತನ ಧರ್ಮದ ಸಂರಕ್ಷಣೆ ಅಗತ್ಯವಿದೆ ಎಂದರು.
ಪರಿಸರ ಸಂರಕ್ಷಣೆಗೂ ಹಿಂದೂ ಧರ್ಮದ ಧಾರ್ಮಿಕ ಪದ್ಧತಿಗಳಿಗೂ ಅವಿನಾಭಾವ ಸಂಬಂಧವಿದೆ. ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗ ಆರಾಧಿಸುವ ಮೂಲಕ ಹಿರಿಯರ ಆಚರಣೆಗಳನ್ನು ಗೌರವಿಸಬೇಕು ಎಂದರು.
ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ವಿಶ್ವ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದ್ದು, ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದರು.
ಸುಳ್ಯದ ಡಾ.ಮನೋಜ್ ದಿಕ್ಸೂಚಿ ಭಾಷಣ ಮಾಡಿ, ಶ್ರೇಷ್ಠ ಹಿಂದೂ ಧರ್ಮದ ತಳಹದಿ ಗಟ್ಟಿ ಗೊಳಿಸಬೇಕು. ಹಿಂದೂ ಯುವ ಶಕ್ತಿ ಒಗ್ಗೂಡಬೇಕು. ಜಗತ್ತಿಗೆ ಶಾಂತಿ ಸಾರಿದ ದೇಶ ಭಾರತ. ಹಿಂದೂ ವಿಚಾರಧಾರೆಯಿಂದ ಮಾತ್ರ ಶಾಂತಿ ದೊರಕಲು ಸಾಧ್ಯ ಎಂದರು.
ಕಾರ್ಯಕ್ರಮ ಸಂಯೋಜಕ ಎಚ್.ಆರ್.ಶ್ರೀನಿವಾಸ್ ಮಾತನಾಡಿದರು.
ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ದೇವಿಪ್ರಸಾದ್, ಹೆಬ್ಬಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಅರುಣಕುಮಾರಿ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಗ್ರಾ.ಪಂ. ಸದಸ್ಯರಾದ ಮಂಜುನಾಥ್, ಪರಮೇಶ್, ಎಚ್.ಎಸ್.ರಘು, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್, ನಿವೃತ್ತ ಶಿಕ್ಷಕ ಲೋಕೇಶ್, ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಚ್.ಎಲ್.ಮಂಜುನಾಥ್, ಮುಖಂಡರಾದ ಮಂಜುಳಾ ಮಹಾದೇವ್, ಕಲ್ಪನಾ ಪ್ರಕಾಶ್, ಭಾಗ್ಯ ಪ್ರಭಾಕರ್, ಪವಿತ್ರ ನಾಗೇಶ್, ಸುರೇಶ್, ಲಕ್ಷ್ಮಿ ದಿನೇಶ್, ಯಜಮಾನ ಬಸವರಾಜು, ಎಚ್.ಟಿ.ಮಂಜುನಾಥ್, ಪುಟ್ಟ, ಟಿ.ಬಿ.ಜಗದೀಶ್, ಚಂದ್ರಶೇಖರ್ ಹೆರೂರು, ಭರತ್ ಮಾಚಯ್ಯ, ಹರೀಶ್, ನವನೀತ್, ಸಾಮಾಜಿಕ ಕಾರ್ಯಕರ್ತ ಮೋಹನ್, ಮೋಹನ್ ಭಾಗವಹಿಸಿದ್ದರು.
ಅದ್ದೂರಿ ಶೋಭಾಯಾತ್ರೆ...
ಹಿಂದೂ ಸಂಗಮ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಹಿಂದೂ ಬಾಂಧವರು ಕೇಸರಿ ಶಲ್ಯ ಧರಿಸಿ ಬಾವುಟ ಹಿಡಿದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿಯಿಂದ ಹೆಬ್ಬಾಲೆಯ ಬನಶಂಕರಿ ಸಮುದಾಯ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿಬಂದರು. ಚಂಡೆವಾದ್ಯ ವೀರಗಾಸೆ ಸಮ್ಮುಖದಲ್ಲಿ ಕಳಸ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರಗು ನೀಡಿದರು. ಭಾರತಾಂಬೆಯ ಭಾವಚಿತ್ರ ಹೊತ್ತ ಬೆಳ್ಳಿರಥದಲ್ಲಿ ವಿವಿಧ ವೇಷಧಾರಿಯಾಗಿದ್ದ ಶಾಲಾ ವಿದ್ಯಾರ್ಥಿಗಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಸಾಗಿಬಂದ ಹಿಂದೂ ಬಾಂಧವರಿಗೆ ಮಜ್ಜಿಗೆ ತಂಪುಪಾನಿಯ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.