ADVERTISEMENT

ಕೊಡಗು: ಯೋಧರ ನಾಡಿನ ಮೇಲೆ ಬಿಪಿನ್‌ ರಾವತ್‌ಗೆ ವಿಶೇಷ ಪ್ರೀತಿ

ಕೊಡಗು ಜಿಲ್ಲೆಗೂ ಭೇಟಿ ನೀಡಿದ್ಧ ಸೇನಾಪಡೆಗಳ ಮುಖ್ಯಸ್ಥರು

ಅದಿತ್ಯ ಕೆ.ಎ.
Published 8 ಡಿಸೆಂಬರ್ 2021, 13:58 IST
Last Updated 8 ಡಿಸೆಂಬರ್ 2021, 13:58 IST
2017ರ ನ.4ರಂದು ಬಿಪಿನ್‌ ರಾವತ್‌ ಅವರು ಮಡಿಕೇರಿಗೆ ಭೇಟಿ ನೀಡಿದಾಗ ಅಂದಿನ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಸ್ವಾಗತಿಸಿದ್ದ ದೃಶ್ಯ (ಸಂಗ್ರಹ ಚಿತ್ರ)
2017ರ ನ.4ರಂದು ಬಿಪಿನ್‌ ರಾವತ್‌ ಅವರು ಮಡಿಕೇರಿಗೆ ಭೇಟಿ ನೀಡಿದಾಗ ಅಂದಿನ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಸ್ವಾಗತಿಸಿದ್ದ ದೃಶ್ಯ (ಸಂಗ್ರಹ ಚಿತ್ರ)   

ಮಡಿಕೇರಿ: ‘ಯೋಧರ ನಾಡು’ ಕೊಡಗು ಜಿಲ್ಲೆಯ ಮೇಲೆ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ಗೆ ವಿಶೇಷ ಅಕ್ಕರೆ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಅವರು ಈ ಜಿಲ್ಲೆಗೆ ನಾಲ್ಕು ಬಾರಿ ಭೇಟಿ ನೀಡಿದ್ದರು.

ಅವರಿದ್ದ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲೆಯಲ್ಲಿ ನೆಲೆಸಿರುವ ನಿವೃತ್ತ ಸೇನಾಧಿಕಾರಿಗಳು ಹಾಗೂ ಅವರೊಂದಿಗೆ ಕೆಲಸ ಮಾಡಿದ್ದ ಮಾಜಿ ಸೈನಿಕರು ದಿಗ್ಭ್ರೆಮೆ ವ್ಯಕ್ತಪಡಿಸಿದರು. ಎಲ್ಲರೂ ಬದುಕಿ ಬರಲೆಂದು ಪ್ರಾರ್ಥಿಸಿದರು.

ಜಿಲ್ಲೆಯಲ್ಲಿ ಸೇನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದಾಗ ರಾವತ್‌ ಅವರಿಗೆ ಆಹ್ವಾನ ನೀಡಿದರೆ, ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಇಲ್ಲಿಗೆ ಬರುತ್ತಿದ್ದರು ಎಂದು ನಿವೃತ್ತ ಸೇನಾಧಿಕಾರಿಗಳು ನೆನಪಿಸಿಕೊಂಡರು.

2016ರ ಆಗಸ್ಟ್ 7ರಂದು ಮಡಿಕೇರಿಯಲ್ಲಿ ಕರ್ನಾಟಕ ಹಾಗೂ ಕೇರಳ ಸಬ್‌ ಏರಿಯಾದ ವತಿಯಿಂದ ನಡೆದಿದ್ದ ನಿವೃತ್ತ ಯೋಧರ ಸಮಾವೇಶಕ್ಕೆ ಅಂದಿನ ಭೂಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಸುಹಾಗ್ ಅವರೊಂದಿಗೆ ರಾವತ್‌ ಬಂದಿದ್ದರು. ಆಗ ರಾವತ್‌, ದಕ್ಷಿಣ ವಲಯದ ಕಮಾಂಡರ್‌ ಇನ್‌ ಆರ್ಮಿ ಚೀಫ್‌ ಆಗಿದ್ದರು. ಮಡಿಕೇರಿಯಲ್ಲಿ ಸೇನೆ ವತಿಯಿಂದ ನಡೆದಿದ್ದ ಗಾಲ್ಫ್‌ ಟೂರ್ನಿಯಲ್ಲೂ ಒಮ್ಮೆ ಪಾಲ್ಗೊಂಡಿದ್ದರು.

ಭೂಸೇನಾ ಮುಖ್ಯಸ್ಥರಾದ ಬಳಿಕ 2017ರ ನ.4ರಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾವತ್‌ ಅವರು ಆಗಮಿಸಿದ್ದರು. ಈ ವರ್ಷದ ಫೆ.6ರಂದು ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರೊಂದಿಗೆ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಮೇಲೆಯೂ ರಾವತ್‌ ಬಂದಿದ್ದರು. ಅವರ ಪತ್ನಿಯೂ ಜೊತೆಗಿದ್ದರು.

‘ಇದೊಂದು ಅದ್ಭುತ ಗಳಿಗೆ. ತಿಮ್ಮಯ್ಯ ಹೆಸರು ಭಾರತೀಯ ಯೋಧರ ಮನಸ್ಸಿನಲ್ಲಿಯೂ ಉಳಿದಿದೆ’ ಎಂದು ರಾವತ್‌ ಅಂದು ಹೇಳಿದ್ದರು.

‘ರಾವತ್‌ ಅವರಿಗೆ ನಮ್ಮ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ. ತಿಮ್ಮಯ್ಯ ಮ್ಯೂಸಿಯಂಗೆ ಅಗತ್ಯವಿರುವ ಸೇನಾ ಪರಿಕರ ನೀಡುವಂತೆ ಮನವಿ ಮಾಡಿದಾಗ ಮರು ಮಾತಿಲ್ಲದೇ ಯುದ್ಧ ಟ್ಯಾಂಕ್, ಯುದ್ಧ ವಿಮಾನ ಕಳುಹಿಸಿದ್ದರು. ತಿಮ್ಮಯ್ಯ ಅವರು ಸೇವೆಯಲ್ಲಿದ್ದಾಗ ಬಳಸಿದ್ದ ಬಂದೂಕುಗಳನ್ನೂ ಜೋಪಾನವಾಗಿ ಕಳುಹಿಸಿದ್ದರು. ಉದ್ಘಾಟನೆ ವೇಳೆ ಅವುಗಳನ್ನು ಕಣ್ತುಂಬಿಕೊಂಡು ಹೋಗಿದ್ದರು. ಮ್ಯೂಸಿಯಂಗೆ ಆರ್ಥಿಕ ನೆರವು ಕೊಡಿಸಲು ಸಹಕರಿಸಿದ್ದರು. ಇಲ್ಲಿಗೆ ಬಂದಾಗ ಕೊಡವರ ಸಾಂಪ್ರದಾಯಿಕ ಪೀಚೆಕತ್ತಿ ನೀಡುತ್ತಿದ್ದೆವು. ಈ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿರುವುದು ಅವರಿಗೆ ಅಭಿಮಾನ ಮೂಡಿಸಿತ್ತು’ ಎಂದು ನಿವೃತ್ತ ಮೇಜರ್‌, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ಫೋರಂನ ಸಂಚಾಲಕ ಬಿದ್ದಂಡ ನಂಜಪ್ಪ ತಿಳಿಸಿದರು.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಪ್ರತಿಮೆಗಳನ್ನು ಬಿಪಿನ್‌ ರಾವತ್‌ ಅವರು ಅನಾವರಣಗೊಳಿಸಿದ್ದ ದೃಶ್ಯ (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.