ADVERTISEMENT

ರಾಜ್ಯದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷ: ಗೌತಮ್ ಗೌಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:19 IST
Last Updated 7 ಫೆಬ್ರುವರಿ 2026, 5:19 IST

ಸೋಮವಾರಪೇಟೆ: ‘ರಾಜ್ಯದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆದಾಗ ಧ್ವನಿ ಎತ್ತಿ ಪ್ರತಿಭಟನೆ ಮಾಡುವುದನ್ನು ಮುಂದುವರೆಸಿಕೊಂಡು ಬರುತ್ತಿದೆ’ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಆಲೇಕಟ್ಟೆ ರಸ್ತೆಯಿಂದ ತೋಳೂರುಶೆಟ್ಟಳ್ಳಿ, ಹರಪಳ್ಳಿ ಗ್ರಾಮದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿರುವುದುದನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜಕೀಯ ಪ್ರೇರಿತ ಎಂದು ದೂಷಿಸಿರುವುದು ಖಂಡನೀಯ’ ಎಂದು ಹೇಳಿದರು.

‘ರಸ್ತೆ ಕಾಮಗಾರಿಗೆ ಭೂಮಿಪೂಜೆ ನಡೆಸಿ ಎರಡು ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಎರಡೂವರೆ ವರ್ಷಗಳಿಂದ ಭೂಮಿ ಪೂಜೆಗಳು ಯಥೇಚ್ಚವಾಗಿ ನಡೆದಿವೆ. ಕಾಮಗಾರಿ ಪ್ರಾರಂಭಿಸಿ, ಪ್ರಾರಂಭಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಬಿಜೆಪಿ ಆಗ್ರಹಿಸಿದರೆ, ಮಳೆಗಾಲ, ಮಳೆಗಾಲ ಎಂದು ಹಾರಿಕೆ ಉತ್ತರ ನೀಡುತ್ತಲೆ ಬರುತ್ತಿದ್ದಾರೆ. ಸರ್ಕಾರದ ಖಜಾನೆ ದಿವಾಳಿಯಾಗಿರುವುದರಿಂದ ಗುತ್ತಿಗೆದಾರರಿಗೆ ಹಣ ಬರುತ್ತಿಲ್ಲ. ಈ ಕಾರಣದಿಂದ ಕಾಮಗಾರಿಗಳು ನಿಂತು ಹೋಗಿವೆ. ರಸ್ತೆ ಕಾಮಗಾರಿ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ ಎಂಬ ಸಾಬೂಬು ಹೇಳುತ್ತಿದ್ದಾರೆ. ಅನುಮತಿ ಪಡೆಯಲು ಎರಡು ವರ್ಷಗಳು ಬೇಕೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದನ್ನು ಕಾಂಗ್ರೆಸ್ ಮುಖಂಡರು ಅರಿಯಬೇಕು. ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಕೊಡಲು ಹಣವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಿ’ ಎಂದು ಹೇಳಿದರು.

ADVERTISEMENT

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ‘ನಾನು ಕೂಡ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕಲ್ಪಿಸಿದ್ದೇನೆ. ಶಾಸಕ ಡಾ.ಮಂತರ್‌ಗೌಡ ಅವರು ರಸ್ತೆ ಕಾಮಗಾರಿಗೆ ₹ 20 ಕೋಟಿ ಅನುದಾನವನ್ನು ಸರ್ಕಾರದಿಂದ ಕೊಡಿಸಿರುವುದು ಶ್ಲಾಘನೀಯ. ಆದರೆ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಧೂಳಿನಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಂಚಾರಕ್ಕೆ ಯೋಗ್ಯವಾಗಿದ್ದ ರಸ್ತೆಯನ್ನು ಏತಕ್ಕಾಗಿ ಆಗೆದು ಹಾಕಿದ್ದಾರೆ’ ಎಂದು ಪ್ರಶ್ನಿಸಿದರು.

ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ‘ಬಿಜೆಪಿಯವರು ಹಿಂಬಾಗಿಲಿನಿಂದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿರುವುದು ಹಾಸ್ಯಾಸ್ಪದ’ ಎಂದರು.

ಗೋಷ್ಠಿಯಲ್ಲಿ ಮಂಡಲ ಕಾರ್ಯದರ್ಶಿ ದರ್ಶನ್ ಜೋಯಪ್ಪ, ಎಸ್ಸಿ ಮೋರ್ಚಾದ ಪಿ.ಕೆ. ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.