ADVERTISEMENT

ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಮೇ 2024, 5:41 IST
Last Updated 18 ಮೇ 2024, 5:41 IST
   

ಮಡಿಕೇರಿ: ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನೀತಿಗಳ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಇರದೇ ಬೆಂಗಳೂರಿಗೆ ತೆರಳಿರುವ ಮಾಹಿತಿ ಅರಿತ ಅವರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಅರಣ್ಯ ಭವನದ ಕಚೇರಿಗೆ ಬೀಗ ಹಾಕುವುದಾಗಿಯೂ ಎಚ್ಚರಿಕೆ ನೀಡಿದರು. ಅಂತಿಮವಾಗಿ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಅರಣ್ಯ ಭವನದ ಗೇಟಿನಿಂದ ಕಚೇರಿಯವರೆಗೆ ಬೃಹತ್ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಕಚೇರಿಯ ಮುಂಬಾಗಿಲಿನಲ್ಲಿ ಕುಳಿತ ಅವರು, ‘ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದ್ದಾಗ್ಯೂ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿರದೇ ಬೆಂಗಳೂರಿಗೆ ಹೋಗಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು. ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಖಾಸಗಿ ತೋಟಗಳಲ್ಲಿರುವ ಮರಗಳ ಸರ್ವೇ ಕಾರ್ಯ ನಡೆಸುತ್ತಿರುವುದು ಸರಿಯಲ್ಲ’ ಎಂದು ಖಂಡಿಸಿದರು.

‘ಜಿಲ್ಲೆಯ ಬಹಳಷ್ಟು ಕಡೆ ಅರಣ್ಯ ಇಲಾಖೆ ತನ್ನ ನೀತಿಯನ್ನೇ ಪಾಲಿಸುತ್ತಿಲ್ಲ’ ಎಂದು ಆರೋಪಿಸಿದ ಅವರು, ‘ಜಿಲ್ಲೆಯ ದೇಗುಲಗಳಲ್ಲಿ ಕಾಡುಕುರಿಗಳ ಕೊಂಬುಗಳು ಸಾಂಪ್ರದಾಯಿಕ ಬದ್ಧವಾಗಿ ತಲೆತಲಾಂತರಗಳಿಂದ ಇದೆ. ಈಗ ಅದನ್ನೂ ವಾಪಸ್ ಕೊಡುವಂತೆ ಸರ್ಕಾರ ಆದೇಶಿಸಿರುವುದು ಸರಿಯಲ್ಲ’ ಎಂದು ಖಂಡಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ‘ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಈ ಹೋರಾಟವನ್ನು ಹಂತಹಂತವಾಗಿ ಮುಂದುವರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸುನಿಲ್‌ ಸುಬ್ರಮಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್‌ ಜೈನಿ, ವಕ್ತಾರರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಬಿ.ಕೆ.ಅರುಣ್‌ಕುಮಾರ್, ತಳೂರು ಕಿಶೋರ್‌ಕುಮಾರ್, ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಅಫ್ರು ರವೀಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.