ಕುಶಾಲನಗರ: ನಶಿಸಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆಯ ಶ್ರೀ ಬಸವೇಶ್ವರ ಯುವಕರ ಬಳಗದ ವತಿಯಿಂದ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿ,‘ಗ್ರಾಮೀಣ ಕ್ರೀಡೆಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ‘ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹೈನುಗಾರಿಕೆಗೆ ಒತ್ತು ನೀಡುವುದರ ಜೊತೆಯಲ್ಲಿ ಇಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ 20 ಜೊತೆಯ ಎರಡು ಹಲ್ಲಿನ ಕರುಗಳು, ನಾಲ್ಕು ಹಲ್ಲಿನ ಕರುಗಳು ಪಾಲ್ಗೊಂಡಿದ್ದವು.
ಬಳಗದ ಅಧ್ಯಕ್ಷ ದರ್ಶನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಕುಮಾರಿ, ಸದಸ್ಯರಾದ ಎಚ್.ಎಸ್. ಮಂಜುನಾಥ್, ಮಹದೇವ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಹೆಬ್ಬಾಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಸ್. ಶೇಖರ್, ಎಚ್.ಟಿ.ದಿನೇಶ್, ಜೆಡಿಎಸ್ ಪ್ರಮುಖ ಎಚ್.ಜೆ. ಶರತ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಪ್ರಮುಖರಾದ ಮಂಜುನಾಥ್, ಗಿರೀಶ್, ಜಗದೀಶ್ , ಯುವಕರ ಬಳಗದ ಗೌರವಾಧ್ಯಕ್ಷ ಎಚ್.ಟಿ. ಜಗದೀಶ್, ಕಾರ್ಯದರ್ಶಿ ಅರುಣ್ ಕುಮಾರ್, ಸಚಿನ್ ಬಳಗದ ನಿರ್ದೇಶಕರು, ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹುಲಿ ಧ್ರುವ ತಂಡ ಪ್ರಥಮ, ಮೈಸೂರು ಜಿಲ್ಲೆಯ ಸೋಮಣ್ಣ ತಂಡ ದ್ವಿತೀಯ, ಶಂಕರ್ ತಂಡ ತೃತೀಯ ಸ್ಥಾನ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.