ADVERTISEMENT

ಭಾಗಮಂಡಲ: ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ

ಪತ್ತಾಯಕ್ಕೆ ಅಕ್ಕಿ ಹಾಕಿದ ಬಳ್ಳಡ್ಕ ಕುಟುಂಬಸ್ಥರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 11:20 IST
Last Updated 26 ಸೆಪ್ಟೆಂಬರ್ 2020, 11:20 IST
ಭಾಗಮಂಡಲದ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಶನಿವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು 
ಭಾಗಮಂಡಲದ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಶನಿವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು    

ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಶನಿವಾರ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ ನೀಡಲಾಯಿತು. ಇನ್ನು ಒಂದು ತಿಂಗಳು ಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಲಿದೆ.

ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು, ತಮ್ಮ ಐನ್‌ಮನೆಯಲ್ಲಿ ಸೇರಿ ಐನ್‌ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ 8.31ಕ್ಕೆ ತುಲಾ ಲಗ್ನದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಪತ್ತಾಯಕ್ಕೆ ಹಾಕಿದರು.

ADVERTISEMENT

ಅ. 4ರಂದು 10.33ಕ್ಕೆ ಸಲ್ಲುವ ವೃಶ್ಚಿಕಾ ಲಗ್ನದಲ್ಲಿ ಆಜ್ಞಾ ಮುಹೂರ್ತ ನಡೆಯಲಿದೆ. ಭಾಗಮಂಡಲ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಕೆ.ಟಿ.ರಮೇಶ್, ಬಿದ್ದಿಯಂಡ ಸುಭಾಷ್ ಮೀನಾಕ್ಷಿ, ಅಣ್ಣಯ್ಯ, ಪಾತುಪತ್ತೆಗಾರ ಪೊನ್ನಣ್ಣ, ಹೊಸೂರು ಸತೀಶ್ ಕುಮಾರ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅ.17ರಂದು ತೀರ್ಥೋದ್ಭವ ನಡೆಯಲಿದೆ. ಈ ವರ್ಷ ಬೆಳಿಗ್ಗೆ 7.03ಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಳಿದ್ದಾಳೆ.

ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಸಂಬಂಧಿಸಿದಂತೆ ಅ.14ರಂದು ಬೆಳಿಗ್ಗೆ 11.45ಕ್ಕೆ ಅಕ್ಷಯಪಾತ್ರೆ ಇರಿಸುವುದು, ಅದೇ ದಿನ ಸಂಜೆ 5.15ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಯಿಡುವ ಸಾಂಪ್ರದಾಯಿಕ ಆಚರಣೆಗಳು ಕ್ಷೇತ್ರದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.