ADVERTISEMENT

ನಾಪೋಕ್ಲು: ನಾಲ್ಕುನಾಡಿನಲ್ಲಿ ಸಂಭ್ರಮದ ಕೈಲ್ ಪೋಳ್ದ್, ರಂಜಿಸಿದ ಗ್ರಾಮೀಣ ಆಟಗಳು

ಸಿ.ಎಸ್.ಸುರೇಶ್
Published 30 ಆಗಸ್ಟ್ 2023, 7:09 IST
Last Updated 30 ಆಗಸ್ಟ್ 2023, 7:09 IST
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟವನ್ನು ಕಾಫಿ ಬೆಳೆಗಾರ ಕೊಂಡಿರ ನಾಣಯ್ಯ ತೆಂಗಿನಕಾಯಿಗೆ ಗುಂಡುಹೊಡೆಯುವುದರ ಮೂಲಕ ಉದ್ಘಾಟಿಸಿದರು.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟವನ್ನು ಕಾಫಿ ಬೆಳೆಗಾರ ಕೊಂಡಿರ ನಾಣಯ್ಯ ತೆಂಗಿನಕಾಯಿಗೆ ಗುಂಡುಹೊಡೆಯುವುದರ ಮೂಲಕ ಉದ್ಘಾಟಿಸಿದರು.   

ನಾಪೋಕ್ಲು: ಓಟದ ಸ್ಪರ್ಧೆಗಳು, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, ಕಾಳು ಹೆಕ್ಕುವುದು, ನಿಂಬೆ-ಚಮಚ ಓಟ ಸೇರಿದಂತೆ ಹತ್ತಾರು ಗ್ರಾಮೀಣ ಆಟೋಟಗಳು ಜರುಗಿದ್ದು ಇಲ್ಲಿಗೆ ಸಮೀಪದ ಬೇತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ.

ಕೈಲ್ ಪೋಳ್ದ್ ಪ್ರಯುಕ್ತ ಮಂಗಳವಾರ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.

ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ಬೇತು ಗ್ರಾಮದ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟವನ್ನು ಇಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡೆಗಳು ಜನರ ಮನರಂಜಿಸಿದವು.

ADVERTISEMENT

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಯೂತ್ ಕ್ಲಬ್ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ವಹಿಸಿದ್ದರು. ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೊಂಡಿರ ಗಣೇಶ್ ನಾಣಯ್ಯ ಹಾಗೂ ಕುಟ್ಟಂಜೆಟ್ಟಿರ ಶ್ಯಾಮ್ ಬೋಪಣ್ಣ ಪಾಲ್ಗೊಂಡಿದ್ದರು.

ನಾಪೋಕ್ಲುವಿನ ಭಗವತಿ ಯುವಕ ಸಂಘದ ವತಿಯಿಂದಲೂ ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸಮೀಪದ ಬಲ್ಲಮಾವಟಿ ಗ್ರಾಮದ ಅಪೊಲೊ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ವತಿಯಿಂದ ನಾಡಹಬ್ಬ ಕೈಲ್ ಮುಹೂರ್ತ ಪ್ರಯುಕ್ತ ಏರ್ಪಡಿಸಲಾಗಿದ್ದ ಆಟೋಟ ಕೂಟದಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

ಕೈಲ್ ಪೊಳ್ದ್ ಒಟ್ಟಾರೆಯಾಗಿ ಮನರಂಜನಾ ಹಬ್ಬ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್ ಪೊಳ್ದ್ ಅನ್ನು ಆಯಧ ಪೂಜೆ ಎಂದೂ ಕರೆಯುತ್ತಾರೆ. ಈ ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ, ಕತ್ತಿಗಳನ್ನು ಬಳಸುತ್ತಿದ್ದರು. ಆದರೆ, ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆಯಲ್ಲಿ ಇಡುತ್ತಾರೆ. ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಈ ಆಯುಧಗಳನ್ನು ಕನ್ನಿಕೋಂಬರೆಯಿಂದ ಹೊರ ತೆಗೆದು ಭಕ್ತಿಯಿಂದ ಪೂಜಿಸಲಾಗುತ್ತದೆ. ಕೋವಿಯನ್ನು ಪೂಜಿಸಲು ತೋಕುಪೂ (ಕೋವಿ ಹೂ)ವನ್ನು ಬಳಸುತ್ತಾರೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ಕೈಲ್‌ಪೋಳ್ದ್‌ ಆಚರಣೆಯ ಹಿನ್ನೆಲೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು.

ತೆಂಗಿನಕಾಯಿಗೆ ಗುಂಡುಹೊಡೆಯುವುದರ ಮೂಲಕ ಇಲ್ಲಿನ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕೈಲುಮುಹೂರ್ತ ಹಬ್ಬದ ಕ್ರೀಡಾಕೂಟಕ್ಕೆ ಕಾಫಿ ಬೆಳೆಗಾರ ಕೊಂಡಿರ ನಾಣಯ್ಯ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಗ್ರಾಮೀಣ ಕ್ರೀಡಾಕೂಟಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವುದರಿಂದ ಸಾಮರಸ್ಯ ವೃದ್ಧಿಯಾಗುತ್ತದೆ. ಮಕ್ಕಳು ಯುವಜನರು ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡು ಉನ್ನತ ಸ್ಥಾನಕ್ಕೇರಬೇಕು’ ಎಂದರು.

ಯೂತ್ ಕ್ಲಬ್ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ಪೊನ್ನಣ್ಣ ಮಾತನಾಡಿ, ‘ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಕೈಲ್ ಪೋಳ್ದ್ ಆಚರಣೆಯಲ್ಲಿ ಮನರಂಜನಾ ಕ್ರೀಡಾಸ್ಪರ್ಧೆಗಳು ಜನಾಂಗಗಳ ನಡುವಿನ ಬಾಂಧವ್ಯಕ್ಕೆ ಸಹಕಾರಿ ಎಂದರು. ಗ್ರಾಮಸ್ಥರ ನಡುವೆ ಏರ್ಪಡಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯು ನೆರೆದಿದ್ದವರನ್ನು ರಂಜಿಸಿತು.

ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ  ಜನಮನ ರಂಜಿಸಿತು.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿಶಾಸ್ತಾವು ಯುವಕ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದಲ್ಲಿ ಭಾರದ ಕಲ್ಲು ಎಸೆತ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.