ADVERTISEMENT

ಮಡಿಕೇರಿ: ಕೇಂದ್ರ ತಂಡದಿಂದ ಮಳೆ ಹಾನಿ ಪ್ರದೇಶಗಳ ವೀಕ್ಷಣೆ

ಕೊಡಗಿಗೆ ಭೇಟಿ ನೀಡಿದ ಕೇಂದ್ರ ತಂಡ; ವಿವರಣೆ ನೀಡಿ ಮನವರಿಕೆ ಮಾಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 11:46 IST
Last Updated 8 ಸೆಪ್ಟೆಂಬರ್ 2022, 11:46 IST
ಕೊಯನಾಡಿನ ಕಿಂಡಿ ಅಣೆಕಟ್ಟೆಗೆ ಬಂದು ಸಿಲುಕುವ ಮರದ ದಿಮ್ಮಿಗಳು ಹಾಗೂ ಅದರಿಂದ ಉಂಟಾಗುವ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು
ಕೊಯನಾಡಿನ ಕಿಂಡಿ ಅಣೆಕಟ್ಟೆಗೆ ಬಂದು ಸಿಲುಕುವ ಮರದ ದಿಮ್ಮಿಗಳು ಹಾಗೂ ಅದರಿಂದ ಉಂಟಾಗುವ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು   

ಮಡಿಕೇರಿ: ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಕೇಂದ್ರ ಸರ್ಕಾರದ ಮೂವರು ಸದಸ್ಯರನ್ನು ಒಳಗೊಂಡ ತಂಡವು ಬುಧವಾರ ಸಂಜೆ ಜಿಲ್ಲೆಯ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆರಂಭದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮ ಇರಲಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದು ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಭೂಕುಸಿತವನ್ನು ವೀಕ್ಷಿಸಿ ಎಂದು ತಂಡಕ್ಕೆ ಹೇಳಿದರು. ಆ ಮೇರೆಗೆ ರಾಮನಗರದಿಂದ ಮಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕೊಡಗಿಗೂ ತಂಡ ಭೇಟಿ ನೀಡಿತು.

ರಾಮನಗರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಹವಾಮಾನ ಸರಿ ಇಲ್ಲ ಎಂಬ ಕಾರಣಕ್ಕೆ ಹಾರಂಗಿಯ ಹೆಲಿಪ್ಯಾಡ್‌ನಲ್ಲಿ ಇಳಿದ ತಂಡಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು ಸಾಥ್ ನೀಡಿದರು.

ADVERTISEMENT

ಮೊದಲಿಗೆ ಸೀಮೆಹುಲ್ಲುಕಜೆ ಬಳಿಯಲ್ಲಿ ಈಚೆಗೆ ಸಂಭವಿಸಿದ ಭೂಕುಸಿತದ ಪ್ರದೇಶವನ್ನು ತಂಡ ವೀಕ್ಷಿಸಿತು. ಅಲ್ಲಿ ಗುಡ್ಡ ಏಕೆ ಜರಿಯಿತು, ಮಳೆ ಬಿದ್ದ ಪ್ರಮಾಣದ ಮಾಹಿತಿ ಪಡೆಯಿತು.

ನಂತರ, ಮದೆನಾಡು ಬಳಿಯ ಕರ್ತೋಜಿಯಲ್ಲಿ ಮಂಗಳೂರು ಹೆದ್ದಾರಿಗೆ ಕುಸಿದ ಗುಡ್ಡವನ್ನು ಅವರು ವೀಕ್ಷಿಸಿದರು. ಈ ವೇಳೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಮಾತನಾಡಿ, ‘ಗುಡ್ಡವು ಕೇವಲ ಇಲ್ಲಿ ಮಾತ್ರವಲ್ಲ ಇದರ ಹಿಂದಿನಿಂದಲೂ ಕುಸಿಯುತ್ತಿದೆ. ಮೇಲ್ನೋಟಕ್ಕೆ ಇದು ಸಣ್ಣದು ಎನ್ನಿಸಬಹುದು. ಆದರೆ, ಸತತವಾಗಿ ಗುಡ್ಡದಿಂದ ಮಣ್ಣು ಜರಿಯುತ್ತಲೇ ಇದೆ’ ಎಂದು ಭೂಕುಸಿತದ ಸ್ವರೂಪವನ್ನು ತಂಡದ ಸದಸ್ಯರಿಗೆ ಮನದಟ್ಟು ಮಾಡಿಸಿದರು.

ಕೊಯನಾಡಿನ ಶಾಲೆ ಬಳಿ ಸಂಭವಿಸಿರುವ ಭೂಕುಸಿತವನ್ನೂ ಅವರು ವೀಕ್ಷಿಸಿದರು. ಜತೆಗೆ, ಕಿಂಡಿ ಅಣೆಕಟ್ಟೆಯನ್ನು ನೋಡಿದರು. ‘ಇಲ್ಲಿ ಅಣೆಕಟ್ಟೆ ಕುಸಿದಿಲ್ಲ’ ಎಂಬ ಅಭಿಪ್ರಾಯ ತಂಡದ ಸದಸ್ಯರೊಬ್ಬರಿಂದ ವ್ಯಕ್ತವಾದಾಗ ಅಲ್ಲೇ ಇದ್ದ ಮರದದಿಮ್ಮಿಗಳನ್ನು ತೋರಿಸಿ, ಎಲ್ಲೋ ಒಂದು ಕಡೆ ಭೂಕುಸಿತ ಉಂಟಾದರೆ ಈ ಬಗೆಯಲ್ಲಿ ಮರದದಿಮ್ಮಿಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದು ಸಿಲುಕಿ ಪ್ರವಾಹ ಉಂಟಾಗುತ್ತದೆ ಎಂಬ ಸಂಗತಿಯನ್ನು ಅಧಿಕಾರಿಗಳು ವಿವರಿಸಿದರು.

ಈ ಮಧ್ಯೆ ಮಳೆಯಿಂದ ಕಾಫಿ ಬೆಳೆಗೆ ಬಂದಿರುವ ರೋಗಗಳು ಹಾಗೂ ನಾಶವಾಗಿರುವ ಬೆಳೆಯನ್ನೂ ಕೇಂದ್ರ ತಂಡಕ್ಕೆ ತೋರಿಸಿದರು.

ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಷ್ ಕುಮಾರ್ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ ಕೇಂದ್ರ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.