ADVERTISEMENT

1.31 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ

10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:23 IST
Last Updated 7 ಫೆಬ್ರುವರಿ 2026, 5:23 IST
ಮಡಿಕೇರಿಯ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪೋಸ್ಟರ್ ಬಿಡುಗಡೆ ಮಾಡಿದರು
ಮಡಿಕೇರಿಯ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪೋಸ್ಟರ್ ಬಿಡುಗಡೆ ಮಾಡಿದರು   

ಮಡಿಕೇರಿ: ಹುಟ್ಟಿನಿಂದ 16 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡುವುದರಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕು ಹಿಂದುಳಿದಿದೆ. ಈ ಕುರಿತು ಹೆಚ್ಚಿನ ನಿಗಾ ಇರಿಸಿ, ಎಲ್ಲ ಅರ್ಹ ಮಕ್ಕಳಿಗೂ ಲಸಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದರು.

ಇಲ್ಲಿ ಅವರು ಶುಕ್ರವಾರ ನಡೆದ 16 ವರ್ಷದೊಳಗಿನ ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮವು ಜಿಲ್ಲೆಯಲ್ಲಿ ಫೆ.10 ರಂದು ನಡೆಯಲಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆಯ ಅಲ್ಪೆಂಡಜೋಲ್ ಮಾತ್ರೆ ವಿತರಿಸಬೇಕು. ಅರ್ಹ ಮಕ್ಕಳು ಇದರಿಂದ ಹೊರಗುಳಿಯಬಾರದು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ADVERTISEMENT

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ‘ವಿಪಿಡಿ’ ಸರ್ವೇಕ್ಷಣಾ ಕಾರ್ಯಕ್ರಮದಲ್ಲಿ ನಿಗದಿತ ಗುರಿ ತಲುಪಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

‘ಜಂತುಹುಳು ಇರುವ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಾರೆ. ಆದ್ದರಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುವುದರೊಂದಿಗೆ ಶೈಕ್ಷಣಿಕ ಬೆಳವಣಿಗೆ ಸಹ ಕಡಿಮೆಯಾಗುವ ಕಾರಣದಿಂದ ಎಲ್ಲಾ 1 ರಿಂದ 19 ವರ್ಷದ ಮಕ್ಕಳು ಜಂತು ಹುಳು ನಿವಾರಣೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು’ ಎಂದರು.

ಫೆ. 10 ರಂದು ಎಲ್ಲೆಡೆ ‘ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ’(ಎನ್.ಡಿ.ಡಿ) ನಡೆಯಲಿದ್ದು, ಫೆ.16 ರಂದು ‘ಮಾಪ್ ಆಪ್ ದಿನ’ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ 1-5 ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಾಗುತ್ತದೆ. 6 ರಿಂದ 19 ವರ್ಷದ ಮಕ್ಕಳಿಗೆ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು 1ರಿಂದ 19 ವರ್ಷದೊಳಗಿನ ಅಂಗನವಾಡಿ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯ ಎಂದೂ ಅವರು ಮನವಿ ಮಾಡಿದರು. ಈಗಾಗಲೇ 1,31,783 ಮಕ್ಕಳಿಗೆ ವಿತರಿಸಲು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾತ್ರೆಗಳನ್ನು ನೀಡಲಾಗಿದೆ ಎಂದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆಯ ಅಧಿಕಾರಿಗಳು ಹಾಗೂ ಇತರೆ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.