ADVERTISEMENT

ಶನಿವಾರಸಂತೆ: ಪುಂಡರ ಉಪಟಳದ ಬಗ್ಗೆ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿಯರ ಅಳಲು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
ಗ್ರಾಮಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು
ಗ್ರಾಮಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು   

ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಸಂಜೀವಿನಿ ಸಭಾಂಗಣದಲ್ಲಿ ದುಂಡಳ್ಳಿ  ಗ್ರಾಮ ಪಂಚಾಯಿತಿ ಹಾಗೂ ಸಿಎಂಸಿಎ ಸಂಸ್ಥೆ ಮತ್ತು ಕೊಡಗು ನಾವು ಪ್ರತಿಷ್ಠಾನಾ ಸಂಸ್ಥೆ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಹಲವು  ಪ್ರಶ್ನೆಗಳು ವಿದ್ಯಾರ್ಥಿಗಳಿಂದ ವ್ಯಕ್ತವಾದವು. ಬಹಳಷ್ಟು ವಿದ್ಯಾರ್ಥಿನಿಯರು ಪುಂಡ ಪೋಕರಿಗಳ ಉಪಟಳವನ್ನು ಪ್ರಸ್ತಾಪಿಸಿದರು.

ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ಮುಬಾಷಿರಾ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿಗುರು ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ಪ್ರಶ್ನೆಗಳ ಸುರಿಮಳೆಗರೆದರು.

‘ಶಾಲೆಗೆ ಬೆಳಿಗ್ಗೆ ಬರುವಾಗ ಮತ್ತು ಸಂಜೆ ಮನೆಗೆ ಹೋಗುವ ಸಮಯದಲ್ಲಿ ಬೈಕ್‍ನಲ್ಲಿ ಬರುವ ಪುಂಡ ಪೋಕರಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸಿ ಅಸಭ್ಯ ವರ್ತನೆ ತೋರುತ್ತಾರೆ. ಇದರಿಂದ ನಮಗೆ ಭಯವಾಗುತ್ತಿದ್ದು ಪೊಲೀಸರು ಇವರ ವಿರುದ್ದ ಕ್ರಮಕೈಗೊಂಡು ನಮಗೆ ರಕ್ಷಣೆ ನೀಡಬೇಕು’ ಎಂದು ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಮುಬಾಷಿರ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.

ADVERTISEMENT

ಮಾದ್ರೆ ಸರ್ಕಾರಿ ಶಾಲೆಯ 1ನೆ ತರಗತಿ ವಿದ್ಯಾರ್ಥಿನಿ ತಾನ್ವಿಕ ‘ಪಟ್ಟಣದ ಖಾಸಗಿ ಶಾಲಾ ವಾಹನಗಳು ಹಳ್ಳಿಗಳಲ್ಲಿ ಅತೀ ವೇಗವಾಗಿ ಸಂಚರಿಸುತ್ತವೆ. ಇದರಿಂದ ರಸ್ತೆಯಲ್ಲಿ ನಾವು ಶಾಲೆಗೆ ನಡೆದುಕೊಂಡು ಹೋಗುವಾಗ ಮತ್ತು ಮನೆಗೆ ಬರುವಾಗ ಭಯವಾಗುತ್ತಿದೆ’ ಎಂದು ಗಮನ ಸೆಳೆದಳು.

‘ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಇವುಗಳು ನಮ್ಮ ಮೇಲೆ ಕಚ್ಚಲು ಬರುತ್ತದೆ ನಮಗೆ ಶಾಲೆಗೆ ಬರಲು ಭಯವಾಗುತ್ತಿದೆ’ ಎಂದು ವಿದ್ಯಾರ್ಥಿನಿ ಪ್ರೀತಿಶ್ರೀ ಪ್ರಸ್ತಾಪಿಸಿದಳು.

ಮಾದ್ರೆ ಶಾಲೆಯ ಬಾಲಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡುವಂತೆ ದೀಕ್ಷಾ ಮನವಿ ಮಾಡಿದಳು.

ಖಾಸಗಿ ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡುವಂತೆ ಸರ್ಕಾರಿ ಶಾಲೆಗೂ ವ್ಯವಸ್ಥೆ ಮಾಡಿಕೊಡಿ ಎಂದು ಚಿಕ್ಕಕೊಳ್ಳತ್ತೂರು ಶಾಲಾ ವಿದ್ಯಾರ್ಥಿನಿ ಆಗ್ರಹಿಸಿದಳು.

ಬಿಳಹ ಸರ್ಕಾರಿ ಶಾಲಾ ಮಕ್ಕಳು ಶಾಲಾ ಕೊಠಡಿಗಳಗೆ ಸುಣ್ಣ, ಬಣ್ಣ ಹಾಕುವಂತೆ, ಅರ್ದಕ್ಕೆ ನಿಂತಿರುವ ತಡೆಗೊಡೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗೆ ಪೀಠೋಪಕರಣ, ಶಾಲೆಗೆ ಕುಡಿಯುವ ನೀರಿನ ಹೆಚ್ಚುವರಿ ಟ್ಯಾಂಕ್ ನಿರ್ಮಿಸುವಂತೆ, ನೀರಿನ ಟ್ಯಾಂಕ್ ಸ್ವಚ್ಚಗೊಳಿಸುವಂತೆ ಮುಂತಾದ ಸಮಸ್ಯೆಗಳನ್ನು ತೆರೆದಿಟ್ಟರು.

ಅಧ್ಯಕ್ಷತೆ ವಹಿಸಿದ ವಿದ್ಯಾರ್ಥಿನಿ ಮುಬಾರಿಷ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿಗುರು ಮತ್ತು ಪಿಡಿಒ ಆಯಿಷಾ ಬಾನು ಮಾತನಾಡಿದರು.

ನಾವು ಪ್ರತಿಷ್ಠಾನಾ ಸಂಸ್ಥೆಯ ವನಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ನಿವೇದಿತಾ, ಯಶನ್, ಶಾಯಿರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಗಿರೀಶ್, ಬೋಜಪ್ಪ, ನಂದಿನಿ, ಪೊಲೀಸ್ ಸಿಬ್ಬಂದಿ ವಿನಯ್ ಗ್ರಾ.ಪಂ.ಸಿಬ್ಬಂದಿ, ಶಾಲಾ ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.