
ಗೋಣಿಕೊಪ್ಪಲು: ಹೊಸಬಗೆಯ ಅದರಲ್ಲೂ ಶ್ವೇತವಸ್ತ್ರಗಳನ್ನೇ ಹೆಚ್ಚಾಗಿ ತೊಟ್ಟ ಕ್ರೈಸ್ತ ಸಮುದಾಯದ ಪುರುಷರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಮಂಗಳವಾರ ಮಧ್ಯರಾತ್ರಿ ಚುಮುಚುಮು ಚಳಿಯಲ್ಲಿ ಚರ್ಚಗಳ ಕಡೆಗೆ ತೆರಳಿದರು.
ವಿದ್ಯುತ್ ದೀಪಗಳು ಹಾಗೂ ನಕ್ಷತ್ರ ದೀಪಗಳಿಂದ ಅಲಂಕೃತವಾಗಿದ್ದ ಚರ್ಚ್ ಸಭಾಂಗಣದಲ್ಲಿ ಸಾಮೂಹಿಕವಾಗಿ ಏಸುವನ್ನು ಪ್ರಾರ್ಥಿಸಿದರು.
ಚರ್ಚ್ ಸಭಾಂಗಣದ ಪೀಠದಲ್ಲಿದ್ದ ಫಾದರ್ ಅವರು ಏಸು 4 ಉದ್ದೇಶಗಳಿಗಾಗಿ ಜನ್ಮತಾಳಿ ಬಂದರು ಎನ್ನಲಾದ ಪ್ರೀತಿ, ಸಂತೋಷ, ಭರವಸೆ ಮತ್ತು ನಂಬಿಕೆಗಳನ್ನು ಬೋಧಿಸಿದರು. ಏಸುವನ್ನು ಕುರಿತ ವಿವಿಧ ಸಾಹಿತ್ಯದ ಹಾಡುಗಳನ್ನು ಸಾಮೂಹಿಕವಾಗಿ ಹಾಡಿ ಭಕ್ತಿಭಾವ ಮೆರೆದರು.
ಪೊನ್ನಂಪೇಟೆ ಸೇಂಟ್ ಅಂಥೋಣಿ ಚರ್ಚ್ ಮುಂದೆ ಗೋದಲಿಯನ್ನು ಸುಂದರವಾಗಿ ರೂಪಿಸಲಾಗಿತ್ತು. ಕೆಲವು ಕಾಳುಗಳನ್ನು ಮೊಳೆಗ ಕೊಟ್ಟು ಬೆಳೆಸಿ ಹುಲ್ಲಿನ ರೂಪ ಮೂಡಿಸಿ ಅದರ ಮೇಲೆ ಏಸುವಿನ ಪ್ರತಿ ರೂಪವನ್ನು ಮಲಗಿಸಲಾಗಿತ್ತು.
ಗೋಣಿಕೊಪ್ಪಲು, ಪಾಲಿಬೆಟ್ಟ, ಕುಟ್ಟ, ಭದ್ರಗೋಳ, ದೇವರಪುರ ಮೊದಲಾದ ಚರ್ಚ್‌ಗಳಲ್ಲಿಯೂ ಶ್ರದ್ಧಾಭಕ್ತಿಯ ಕ್ರಿಸ್ಮಸ್ ಜರುಗಿತು. ಮಧ್ಯರಾತ್ರಿ 1 ಗಂಟೆವರೆಗೂ ನಡೆದ ಭಜನೆಯಲ್ಲಿ ಪಾಲ್ಗೊಂಡಿದ್ದ ಜನರು ಸಮಾಜಕ್ಕೆ ಶಾಂತಿ ಸಂದೇಶ ಬೀರಿದರು.
ಶ್ರೀಮಂಗಲ ಜೇಸಿ ಪ್ರೌಢಶಾಲೆಯ ಶಿಕ್ಷಕ ಬಿಂದುಸಾರ, ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಬೆನಡಿಕ್ಟ ಫರ್ನಾಂಡಿಸ್, ಸ್ಟೀಫನ್, ಮರೀನಾ, ಎಲಿನಾ, ಆರೋನ್, ಗ್ಲೆನ್, ಗ್ಲಾಕಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.