
ಕುಶಾಲನಗರ: ತಾಲ್ಲೂಕಿನ ವಿವಿಧೆಡೆ ಗುರುವಾರ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಕುಶಾಲನಗರ, ಕೂಡಿಗೆ, ಸಿದ್ದಲಿಂಗಪುರ ಹಾಗೂ ಏಳನೇ ಹೊಸಕೋಟೆ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ಹೊಸ ಉಡುಗೆ ತೊಡುಗೆ ಧರಿಸಿ ಸಂತ ಸೆಬಾಸ್ಟೀನರ ದೇವಾಲಯ ಮತ್ತು ಸಿಎಸ್ಐ ಮೇಡಕ್ ಮೆಮೋರಿಯಲ್ ಚರ್ಚ್ ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದಲ್ಲಿ ಧರ್ಮಗುರು ಮಾರ್ಟಿನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಕೂಡಿಗೆ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ವಂದನೀಯ ಚಾರ್ಲ್ಸ್ ನೋರೋನ್ಹಾ ನೇತೃತ್ವದಲ್ಲಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸುಂಟಿಕೊಪ್ಪದ ಸಂತಮೇರಿಸ್, ಏಳನೇ ಹೊಸಕೋಟೆ ಮತ್ತು ಸಿದ್ದಲಿಂಗಪುರ ಗ್ರಾಮದಲ್ಲಿ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಬಾಂಧವರು ಪರಸ್ಪರ ಸಿಹಿ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಯಿತು. ಸಂತಾಕ್ರಾಸ್ ವೇಷ ಧರಿಸಿದ್ದ ವ್ಯಕ್ತಿ ಮನೆ ಮನೆಗೆ ತೆರಳಿ ಪರಸ್ಪರ ಶುಭಾಶಯ ಹಂಚಿಕೊಂಡರು. ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಜನಿಸಿದ ಏಸುವಿನ ಆಗಮನಕ್ಕಾಗಿ ದನಕೊಟ್ಟಿಗೆ ನಿರ್ಮಿಸಿ, ಅದರಲ್ಲಿ ಬಾಲ ಏಸುವಿನ ಹಾಗೂ ಮಾತೆ ಮೇರಿಯ ಗೊಂಬೆ ಸ್ಥಾಪಿಸಿದ್ದರು. ಕ್ರಿಸ್ ಮಸ್ ಮರಕ್ಕೆ ಅಲಂಕಾರ, ಮನೆಯನ್ನು ವಿದ್ಯುತ್ ದ್ದೀಪಗಳಿಂದ ಶೃಂಗರಿಸಿದ್ದರು.
ಬಣ್ಣ ಬಣ್ಣದ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಟ್ಟಣದ ಸೆಬಾಸ್ಟೀನರ ಚರ್ಚ್ ಆಡಳಿತ ಮಂಡಳಿ ಪದಾಧಿಕಾರಿಗಳಾದ ಸವರಿನ್ ಡಿಸೋಜ, ಶಾಜಿ ಕೆ.ಜಾರ್ಜ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕ್ರೆಜ್ವಲ್ ಕೊಟ್ಸ್, ರಾಯ್, ಯೋಸುದಾಸ್, ಜಾನ್, ಫಿಲಿಪ್ ವಾಸ್, ಅಂಥೋಣಿ ,ಸೆಲಿನಾ,ಹುರ್ಬಟ್ ಡೈಸ್, ಸುನಿಲ್, ಸುಖಿ, ಶಾಂತಪ್ಪ, ಆಲ್ಬರ್ಟ್, ಪೌಲ್ಸನ್ ಮತ್ತಿತರರು ಭಾಗವಹಿಸಿದ್ದರು.
ಕ್ರಿಸ್ಮಸ್ ಆಚರಣೆ: ಇಲ್ಲಿನ ಟೋಲ್ ಗೇಟ್ ಬಳಿ ಇರುವ ಸಿಎಸ್ಐ ಮೇಡಕ್ ಚರ್ಚ್ ನಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರೆವರೆಂಡ್ ಫಾದರ್ ಶುಭ ಸಂದೇಶ ನೀಡಿದರು. ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ ಮುಖಂಡರಾದ ಜೋಸೆಫ್ ವಿಕ್ಟರ್ ಸೋನ್ಸ್, ಜಾನ್, ಸುಕುಮಾರ್, ಸುನಂದಕುಮಾರ್, ಸೆಮ್ಮಿ ಡೆವೀಡ್, ಅಗಸ್ಟಿನ್, ಮಿಲ್ಟನ್, ಅನಿತಾ ಚಾಲ್ಸ್, ಮಿಂಟನ್, ನೆಲ್ಸನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.