ADVERTISEMENT

‘ನಾಗರಿಕರ ಸ್ವಾತಂತ್ರ್ಯವೇ ಪ್ರಮುಖ’

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:06 IST
Last Updated 11 ಡಿಸೆಂಬರ್ 2025, 3:06 IST
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬುಧವಾರ ಮಾನವ ಹಕ್ಕು ದಿನಾಚರಣೆಯನ್ನು ವಕೀಲ ಕೆ.ಬಿ.ಸಂಜೀವ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಿಯಪ್ಪ, ನಯನ ತಮ್ಮಯ್ಯ,ಕೆ.ಟಿ.ಸೀತಮ್ಮ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬುಧವಾರ ಮಾನವ ಹಕ್ಕು ದಿನಾಚರಣೆಯನ್ನು ವಕೀಲ ಕೆ.ಬಿ.ಸಂಜೀವ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಿಯಪ್ಪ, ನಯನ ತಮ್ಮಯ್ಯ,ಕೆ.ಟಿ.ಸೀತಮ್ಮ ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ‘ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರ ಡಿ.10ರಂದು ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ’ ಎಂದು ವಕೀಲ ಕೆ.ಬಿ.ಸಂಜೀವ ಹೇಳಿದರು.

ಇಲ್ಲಿನ ಕಾವೇರಿ ಕಾಲೇಜು ಐಕ್ಯೂಎಸಿ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ಬುಧವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರೀಯತೆ, ವಾಸಸ್ಥಳ, ಲಿಂಗ, ರಾಷ್ಟ್ರೀಯ ಅಥವಾ ಜನಾಂಗೀಯ ಮೂಲ, ಬಣ್ಣ, ಧರ್ಮ, ಭಾಷೆ, ಸ್ಥಾನಮಾನ ಯಾವುದೇ ಇದ್ದರೂ ಪ್ರತಿಯೊಬ್ಬ ವ್ಯಕ್ತಿಯು ತಾರತಮ್ಯವಿಲ್ಲದೆ ಮಾನವ ಹಕ್ಕುಗಳನ್ನು ಚಲಾಯಿಸಲು ಅರ್ಹನಾಗಿರುತ್ತಾನೆ’ ಎಂದರು.

‘ಮಾನವ ಬದುಕಿಗೆ ಅತ್ಯವಶ್ಯಕವಾಗಿರುವ ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ತಿಳುವಳಿಕೆ ಹೊಂದಿರಬೇಕು ಹಾಗೂ ಇತರರಿಗೂ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ‘ಭಾರತವು ಆದಿಕಾಲದಿಂದಲೂ ಮಾನವ ಹಕ್ಕುಗಳನ್ನು ಗೌರವಿಸುತ್ತಾ ಬಂದಿದೆ. ಆಧುನಿಕ ಶಿಕ್ಷಣ ಪದ್ಧತಿ ಬಂದ ನಂತರ ನಮ್ಮಲ್ಲಿ ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಲಾರಂಭಿಸಿದೆ. ನಾವೆಲ್ಲರೂ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಾತಿ, ಧರ್ಮ, ಲಿಂಗ, ಮೇಲು, ಕೀಳು ಎಂಬ ಬೇಧ ಭಾವವನ್ನು ಬಿಟ್ಟು ಮಾನವವನ್ನು ಮಾನವನನ್ನಾಗಿ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ’ ಎಂದರು.

ಐಕ್ಯೂಎಸಿ ಸಂಚಾಲಕಿ ನಯನ ತಮ್ಮಯ್ಯ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಕೆ.ಟಿ.ಸೀತಮ್ಮ, ಉಪನ್ಯಾಸಕರಾದ ಸಿ.ಟಿ.ಕಾವ್ಯ, ಮಂಜುನಾಥ್ ಹಾಜರಿದ್ದರು.