ADVERTISEMENT

ಸಿಜೆಐ ಮೇಲೆ ಶೂ ಎಸೆದ ಪ್ರಕರಣ: ದಲಿತ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:02 IST
Last Updated 11 ಅಕ್ಟೋಬರ್ 2025, 6:02 IST
ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ  ಕೊಡಗು ಜಿಲ್ಲಾ ದಲಿತ ಹಿತರಕ್ಷಣ ಒಕ್ಕೂಟ ಶುಕ್ರವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿತು.
ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ  ಕೊಡಗು ಜಿಲ್ಲಾ ದಲಿತ ಹಿತರಕ್ಷಣ ಒಕ್ಕೂಟ ಶುಕ್ರವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿತು.   

ಸೋಮವಾರಪೇಟೆ: ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಈಚೆಗೆ ಶೂ ಎಸೆಯಲು ಪ್ರಯತ್ನಿಸಿದ ಘಟನೆಯನ್ನು ಖಂಡಿಸಿ, ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ದಲಿತ ಹಿತರಕ್ಷಣ ಒಕ್ಕೂಟ ಶುಕ್ರವಾರ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವಸರಪಳಿ ರಚಿಸಿ ಪ್ರತಿಭಟನೆ ನಡೆಸಿತು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ವಕೀಲ ರಾಕೇಶ್ ಕಿಶೋರ್ ನ್ಯಾಯಪೀಠದ ಮೇಲೆ ಶೂ ಎಸೆಯಲು ಮುಂದಾದ  ನಡುವಳಿಕೆ ಸಂವಿಧಾನ ವಿರೋಧಿಯಾಗಿದೆ.   ವಕೀಲರಿಂದಲೇ ಕಾನೂನಿಗೆ ಅವಮಾನ ಕ್ಷಮೆಗೆ ಅರ್ಹವಲ್ಲ.  ಕೃತ್ಯ ಎಸಗಲು ಮುಂದಾದ ರಾಕೇಶ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವಾಗಬೇಕು. ಮತ್ತೊಬ್ಬ ವಕೀಲರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೊಳಕು ಮನುಷ್ಯ ಎಂದು ಅವಮಾನಿಸಿರುವ ವರದಿಯಾಗಿದ್ದು, ಇವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಇಬ್ಬರ ವಿರುದ್ಧ ದೇಶದ್ರೋಹ  ಪ್ರಕರಣ ದಾಖಲಿಸುವ ವರೆಗೆ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.
 
ತಾಲ್ಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ರವಾನಿಸಲು ಮನವಿ ಪತ್ರ ಸಲ್ಲಿಸಿದರು.  ಒಕ್ಕೂಟದ ಉಪಾಧ್ಯಕ್ಷ ಕೆ.ಬಿ. ರಾಜು, ಕಾರ್ಯದರ್ಶಿ ಬಿ.ಇ.ಜಯೇಂದ್ರ, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ಜೆ.ಆರ್. ಪಾಲಾಕ್ಷ, ಸುರೇಶ್, ಈರಪ್ಪ ಪ್ರಗತಿಪರ ಚಿಂತಕರು, ದಲಿತಪರ ಹೋರಾಟಗಾರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.