ADVERTISEMENT

ನಾಪೋಕ್ಲು: ಭಗಂಡೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 3:10 IST
Last Updated 22 ಜುಲೈ 2025, 3:10 IST
ಭಾಗಮಂಡಲದ ಗಜಾನನ ಯುವಕ ಸಂಘದ ಸದಸ್ಯರು ಸೋಮವಾರ ಭಗಂಡೇಶ್ವರ ದೇವಾಲಯದ ಆವರಣವನ್ನು ಶುಚಿಗೊಳಿಸಿದರು
ಭಾಗಮಂಡಲದ ಗಜಾನನ ಯುವಕ ಸಂಘದ ಸದಸ್ಯರು ಸೋಮವಾರ ಭಗಂಡೇಶ್ವರ ದೇವಾಲಯದ ಆವರಣವನ್ನು ಶುಚಿಗೊಳಿಸಿದರು   

ನಾಪೋಕ್ಲು: ಭಾಗಮಂಡಲದ ಗಜಾನನ ಯುವಕ ಸಂಘದ ವತಿಯಿಂದ ಭಗಂಡೇಶ್ವರ ದೇವಾಲಯದ ಆವರಣವನ್ನು ಸೋಮವಾರ ಶುಚಿಗೊಳಿಸಲಾಯಿತು.

ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ದೇವಾಲಯದ ಆವರಣದಲ್ಲಿ ಪಾಚಿ ಬೆಳೆದು ನಡೆದಾಡಲು ಸಮಸ್ಯೆಯಾಗಿತ್ತು. ಭಕ್ತರು ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವಾಗ ಜಾರಿ ಬೀಳುವ ಪರಿಸ್ಥಿತಿ ಇತ್ತು. ಈ ಕುರಿತು ಇಲ್ಲಿನ ಅರ್ಚಕರು ಇತ್ತೀಚೆಗೆ ಯುವಕ ಸಂಘದ ಪದಾಧಿಕಾರಿಗಳು ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಯುವಕ ಸಂಘದ ಸದಸ್ಯರು ಸೋಮವಾರ ಕಾರ್ಯಪ್ರವೃತ್ತರಾಗಿ ದೆವಾಲಯದ ಆವರಣವನ್ನು ಶುಚಿಗೊಳಿಸಿದರು. ಸುಣ್ಣದ ಪುಡಿ, ಬೇಕಿಂಗ್ ಪೌಡರ್ ಹಾಕಿ ನೆಲದಲ್ಲಿದ್ದ ಹಾವಸೆಯನ್ನು ತೆರವುಗೊಳಿಸಿದರು. ಗಜಾನನ ಯುವಕ ಸಂಘದ ಅಧ್ಯಕ್ಷ ಗೌರೀಶ್ ರೈ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. 14 ಮಂದಿ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅರ್ಚಕ ಹರೀಶ್ ಭಟ್ ಮಾತನಾಡಿ, ದೇವಾಲಯದ ಆವರಣದಲ್ಲಿ ನೆಲಜಾರುತ್ತಿದ್ದ ಪರಿಣಾಮ ಹೊರ ಜಿಲ್ಲೆಯಿಂದ ಬಂದಿದ್ದ ಭಕ್ತರು ಕೆಲವರು ಜಾರಿ ಬಿದ್ದಿದ್ದರು. ಜುಲೈ 24ರಂದು ಕ್ಷೇತ್ರದಲ್ಲಿ ಪೊಲಿಂಕಾನ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆವರಣವನ್ನು ಸ್ವಚ್ಛಗೊಳಿಸುವ ಅನಿವಾರ್ಯತೆಯ ಬಗ್ಗೆ ಸಂಘದ ಗಮನಕ್ಕೆ ತಂದಿದ್ದು ಯುವಕರು ಮಳೆಯನ್ನು ಲೆಕ್ಕಿಸದೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ತಂಡದ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.