ADVERTISEMENT

ಕೊಡಗು ಜಿಲ್ಲೆಗೆ ಸಿ.ಎಂ ಭೇಟಿ: ಸಂತ್ರಸ್ತರಲ್ಲಿ ನಿರೀಕ್ಷೆ

ಗಾಂಧಿ ಮೈದಾನದಲ್ಲಿ ರೈತರೊಂದಿಗೆ ಸಂವಾದ, ಜಿಲ್ಲೆಯಲ್ಲಿ ನಾಲ್ಕನೇ ಬಾರಿ ಪ್ರವಾಸ

ಅದಿತ್ಯ ಕೆ.ಎ.
Published 16 ಅಕ್ಟೋಬರ್ 2018, 20:00 IST
Last Updated 16 ಅಕ್ಟೋಬರ್ 2018, 20:00 IST
ಭೂಕುಸಿತವಾಗಿದ್ದ ಪ್ರದೇಶ
ಭೂಕುಸಿತವಾಗಿದ್ದ ಪ್ರದೇಶ   

ಮಡಿಕೇರಿ: ಪ್ರಕೃತಿ ವಿಕೋಪದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಗೆ ಬುಧವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, ನೊಂದವರಲ್ಲಿ ಪರಿಹಾರದ ನಿರೀಕ್ಷೆಗಳು ಹುಟ್ಟಿವೆ. ಎರಡು ತಿಂಗಳಿಂದ ಪರಿಹಾರ ನೀಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲ, ಪುನರ್ವಸತಿ ವಿಳಂಬ ಆಗುತ್ತಿರುವುದರಿಂದ ಅಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ, ಕುಮಾರಸ್ವಾಮಿ ಅವರೇ ಮಡಿಕೇರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಅಧಿಕಾರಿಗಳೂ ಚುರುಕಾಗಿದ್ದಾರೆ.

ಮೈಸೂರಿನಿಂದ ಬೆಳಿಗ್ಗೆ 11ಕ್ಕೆ ಮಡಿಕೇರಿಗೆ ಆಗಮಿಸಲಿರುವ ಮುಖ್ಯಮಂತ್ರಿ, ಗಾಂಧಿ ಮೈದಾನದಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳೆ ನಷ್ಟಕ್ಕೆ ಒಳಗಾದ ರೈತರ ಸಮಸ್ಯೆ ಆಲಿಸಲಿದ್ದಾರೆ. ಬಳಿಕ ಅಧಿಕಾರಿಗಳ ಸಭೆ ನಡೆಸಿ ಪುನರ್ವಸತಿ ಕಾರ್ಯದ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಸಂವಾದಕ್ಕೆ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು (ಎನ್.ಜಿ.ಒ), ದಾನಿಗಳು, ಚೇಂಬರ್ ಆಫ್ ಕಾಮರ್ಸ್, ಭಾರತೀಯ ಕೈಗಾರಿಕೆಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಜಿಲ್ಲಾಡಳಿತ ಕೋರಿದ್ದು, ಅಂತಿಮ ರೂಪುರೇಷೆ ಸಿದ್ಧಗೊಳ್ಳುವ ಸಾಧ್ಯತೆಯಿದೆ.

ADVERTISEMENT

ಮಾದರಿ ಮನೆ: ಪುನರ್ವಸತಿ ಕಾರ್ಯಕ್ಕೆ 100 ಎಕರೆ ಸ್ಥಳ ಗುರುತಿಸಲಾಗಿದೆ. ಆರ್‌ಟಿಒ ಕಚೇರಿ ಪಕ್ಕದ ಪುನರ್ವಸತಿ ಜಾಗದಲ್ಲಿ ಮೂರು ಮಾದರಿಯ ಮನೆಗಳನ್ನೂ ನಿರ್ಮಿಸಲಾಗುತ್ತಿದೆ. ಆದರೆ, ಸಂತ್ರಸ್ತರ ಸಮ್ಮುಖದಲ್ಲೇ ಮನೆ ಆಯ್ಕೆ ಮಾಡಲಾಗುವುದೆಂದು ತಿಳಿಸಲಾಗಿತ್ತು. ತಾವೇ ಮನೆ ಕಟ್ಟಿಕೊಳ್ಳಲು ಇಚ್ಛೆ ಉಳ್ಳ ಸಂತ್ರಸ್ತರಿಗೆ ನಿಗದಿತ ಪರಿಹಾರ ನೀಡಲು ಜಿಲ್ಲಾಡಳಿತ ಉದ್ದೇಶಿಸಿತ್ತು. ಆದರೆ, ಅದು ಇನ್ನೂ ಇತ್ಯರ್ಥವಾಗಿಲ್ಲ.

ಬುಧವಾರ ಸಂತ್ರಸ್ತರ ಅಳಲು ಆಲಿಸಿ, ಅವರೊಂದಿಗೆ ಊಟ ಮಾಡಲಿರುವ ಮುಖ್ಯಮಂತ್ರಿ ಅವರು ಈ ಸಮಸ್ಯೆಗೆ ಪರಿಹಾರ ಸೂಚಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. 700 ಮನೆಗಳು ಭೂಕುಸಿತ ಹಾಗೂ ಮಹಾಮಳೆಯಿಂದ ಕುಸಿದಿದ್ದವು.

ಮಾರ್ಗಸೂಚಿ ಸಿದ್ಧವಾಗಿಲ್ಲ: ಭೂಕುಸಿತದಿಂದ ನಾಲ್ಕು ಸಾವಿರ ಎಕರೆ ಕಾಫಿ ತೋಟ ನಾಶವಾಗಿದ್ದು, ಮಾಲೀಕರಿಗೆ ಪರಿಹಾರ ದೊರೆತಿಲ್ಲ. ಪರಿಹಾರದ ಮಾರ್ಗಸೂಚಿಯೂ ಸಿದ್ಧವಾಗಿಲ್ಲ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಹೆಕ್ಟೇರ್‌ಗೆ ₹36 ಸಾವಿರ ಪರಿಹಾರ ನೀಡಲು ಮಾತ್ರ ಅವಕಾಶವಿದೆ ಎಂದು ಅಧಿಕಾರಿಗಳು ಕೈಚೆಲ್ಲಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್‌ ನೀಡಿದರೆ ಮಾತ್ರ ದೊಡ್ಡ ಮೊತ್ತದ ಪರಿಹಾರ ನೀಡಲು ಸಾಧ್ಯ. ಆದರೆ, ಕೇಂದ್ರವು ಅನುದಾನ ಘೋಷಿಸದ ಕಾರಣ ಅಂತಿಮ ತೀರ್ಮಾನವಾಗಿಲ್ಲ ಎಂಬ ಮಾತುಗಳೂ ಇವೆ.

ಏನೇನು ಬೇಡಿಕೆಗಳು?: ದುರಂತದಿಂದ ಬರೀ ಮನೆ ಮಾತ್ರ ನಾಶವಾಗಿಲ್ಲ. ತೋಟದಲ್ಲಿ ಬೆಳೆದಿದ್ದ ಬೆಲೆ ಬಾಳುವ ಮರಗಳು ಕೊಚ್ಚಿ ಹೋಗಿವೆ. ಕಾಫಿ ತೋಟ ಸರ್ವನಾಶವಾಗಿದೆ. ಭೂಕುಸಿತವಾಗಿರುವ ಗ್ರಾಮಗಳಲ್ಲಿ ಭವಿಷ್ಯದಲ್ಲಿ ಕೃಷಿ ಮಾಡಲೂ ಜಮೀನು ಉಳಿದಿಲ್ಲ. ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವೇ ಪರ್ಯಾಯ ಸ್ಥಳದಲ್ಲಿ ಕೃಷಿ ಭೂಮಿ ನೀಡಬೇಕು ಎಂದು ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

ಕಾಲೂರು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಹೆಮ್ಮೆತ್ತಾಳ, ಮೊಣ್ಣಂಗೇರಿ, ಮದೆನಾಡು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಭೂಕುಸಿತದ ಮಣ್ಣು ಬಂದು ನಿಂತಿದೆ. ನಾಟಿ ಮಾಡಿದ ಪೈರು ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಅದರ ಮಣ್ಣು ತೆರವು ಮಾಡಿಸಿಕೊಡಿ ಎಂಬ ಬೇಡಿಕೆಯೂ ಇದೆ. ಆದರೆ, ಕಾರ್ಯ ಸಹ ವಿಳಂಬವಾಗಿದೆ. ಮುಖ್ಯಮಂತ್ರಿ ಸಮ್ಮುಖದಲ್ಲೇ ಈ ಬೇಡಿಕೆಗಳು ಪರಿಹಾರ ಕಾಣುವ ಸಾಧ್ಯತೆಯಿದೆ.

ಕೊಡಗಿನಲ್ಲಿ ಭೂಕುಸಿತಕ್ಕೂ ಮೊದಲು ಬಾರಿ ಮಳೆ ಸುರಿದಿತ್ತು. ಜೂನ್‌, ಜುಲೈನಲ್ಲೇ ಸುರಿದ ಮಳೆಯು ಜನರನ್ನು ನಲುಗುವಂತೆ ಮಾಡಿತ್ತು. ಅಪಾರ ಹಾನಿಯೂ ಸಂಭವಿಸಿತ್ತು. ಆಗಲೇ ನಷ್ಟಕ್ಕೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದರು. ಜುಲೈ 19 ಹಾಗೂ 20ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ಕುಮಾರಸ್ವಾಮಿ, ₹100 ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದರು. ಅದಾದ ನಂತರ ಮತ್ತೆ ಮಹಾಮಳೆ ಸುರಿದು ಪ್ರಕೃತಿ ವಿಕೋಪಕ್ಕೆ ಕೊಡಗು ತತ್ತರಿಸಿತ್ತು. ನೂರಾರು ಮಂದಿ ನಿಶಾಶ್ರಿತರಾಗಿದ್ದರು. ಮತ್ತೆರಡು ಬಾರಿ ಕೊಡಗಿಗೆ ಮುಖ್ಯಮಂತ್ರಿ ಬಂದಿದ್ದರು. ಬುಧವಾರ ಕುಮಾರಸ್ವಾಮಿ ಅವರದ್ದು ನಾಲ್ಕನೇ ಜಿಲ್ಲಾ ಪ್ರವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.